ಯಲ್ಲಾಪುರ: ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಯಲ್ಲಾಪುರ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ-52ರ ಪಕ್ಕದಲ್ಲಿರುವ ಗೂಡಂಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಮಹಾವೀರ ಕಾಂಬಳೆ ಅವರು ಸೆ. 8ರಂದು ಮಧ್ಯಾಹ್ನ ಸುಮಾರು 12.30ಕ್ಕೆ ದಾಳಿ ನಡೆಸಿದಾಗ, ಹುಣಶೇಟ್ಟಿಕೊಪ್ಪ ಗ್ರಾಮದ ಸುಬ್ರಾಯ ಗಂಗಾಧರ ದೇಸಾಯಿ (33) ಎಂಬವರು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದರೆಂಬುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಾಳಿ ವೇಳೆ ಎರಡು ಮದ್ಯದ ಪೌಚ್ಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ 110 ರೂ ಎಂದು ದಾಖಲಿಸಲಾಗಿದೆ. ಇದರ ಜೊತೆಗೆ ಒಂದು ಖಾಲಿ ಮದ್ಯದ ಪೌಚ್, ಅರ್ಧ ಲೀಟರ್ನ ಖಾಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಒಂದು ಪ್ಲಾಸ್ಟಿಕ್ ಗ್ಲಾಸ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.