ಕಾರವಾರ: ಬಹುಕೋಟಿ ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ಜಿಲ್ಲಾದ್ಯಂತ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜನರ ತೆರಿಗೆ ಹಣ ಹಾಗೂ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಚುನಾವಣೆ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ ರೂಪಾಲಿ ನಾಯ್ಕ, ಇಂತಹ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ವಾಲ್ಮೀಕಿ ನಿಗಮದ ಹಣಕಾಸು ಅವ್ಯವಹಾರದ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಹಿಂದೆ ಸರಿದಿದ್ದ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವ ಸರ್ಕಾರದ ನಡೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ನಾಗೇಂದ್ರ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಒಬಿಸಿ ಮೋರ್ಚಾದ ರಾಜೇಂದ್ರ ನಾಯ್ಕ, ನಯನಾ ನೀಲಾವರ, ನಗರಸಭೆ ಮಾಜಿ ಅಧ್ಯಕ್ಷ ರವಿರಾಜ್ ಅಂಕೋಲೇಕರ, ಮನೋಜ್ ಭಟ್ ಹಾಗೂ ಎಸ್ಸಿ ಮೋರ್ಚಾದ ಪ್ರಮುಖರು ಉಪಸ್ಥಿತರಿದ್ದರು.