ಬನವಾಸಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಹಾಗೂ ‘ತಿರಂಗಾ ಯಾತ್ರೆ’ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಬನವಾಸಿ ಮಂಡಲದ ವತಿಯಿಂದ ಬುಧವಾರ ಪಟ್ಟಣದಲ್ಲಿ ಭವ್ಯ ಬೈಕ್ ರ‍್ಯಾಲಿ ನಡೆಯಿತು.
ಪಟ್ಟಣದ ಶ್ರೀ ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ರ‍್ಯಾಲಿಯು ಬನವಾಸಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಗುಡ್ನಾಪುರ ಹಾಗೂ ಮಧುರವಳ್ಳಿ ಗ್ರಾಮಗಳ ಮೂಲಕ ಸಾಗಿತು. ಅಂತಿಮವಾಗಿ ಪಂಪ ವೃತ್ತದಲ್ಲಿ ರ‍್ಯಾಲಿ ಸಂಪನ್ನಗೊಂಡಿತು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಬನವಾಸಿ ಮಂಡಲದ ಪ್ರಭಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಮಂಡಲ ಅಧ್ಯಕ್ಷ ರಮೇಶ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಭಾಶಿ ಶಂಕರ ಗೌಡ ಹಾಗೂ ಮಂಜುನಾಥ ನಾಯ್ಕ್ ಮರಿಗುಡ್ಡೆ, ಯುವ ಮೋರ್ಚಾ ಅಧ್ಯಕ್ಷ ಗೌತಮ್ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಕಪಾಲಿ ಹಾಗೂ ಸಂತೋಷ ನಾಯ್ಕ್ ಸೇರಿದಂತೆ ಪಕ್ಷದ ಪ್ರಮುಖರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಪಕ್ಷದ ಪ್ರಮುಖರಾದ ಗಣೇಶ ಸಣ್ಣಲಿಂಗಣ್ಣನವರ, ವಿಜಯಕುಮಾರ್ ರಾವ್, ಮೃತ್ಯುಂಜಯ ಚೌದರಿ, ಅರವಿಂದ ಶೆಟ್ಟಿ, ವಿ.ಎಂ. ಭಟ್ ಉಂಚಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಾ ಸಣ್ಣಲಿಂಗಣ್ಣನವರ, ರೈತ ಮೋರ್ಚಾ ಅಧ್ಯಕ್ಷ ಮಣಿ ಪಾಟೀಲ್, ಎಸ್‌ಸಿ ಮೋರ್ಚಾ ಅಧ್ಯಕ್ಷೆ ಗೀತಾ ಛಲವಾದಿ ಸೇರಿದಂತೆ ಶಕ್ತಿ ಕೇಂದ್ರಗಳ ಹಾಗೂ ಬೂತ್‌ಗಳ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಮತ್ತು ದೇಶಪ್ರೇಮಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಾ ದೇಶಭಕ್ತಿಯ ವಾತಾವರಣ ನಿರ್ಮಿಸಿದರು. 200ಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ರಾಷ್ಟ್ರಪ್ರೇಮ ಮೆರೆದರು.
ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಪ್ರತಿಯೊಂದು ಮನೆಗೂ ತಲುಪಿಸುವುದು ಹಾಗೂ ‘ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸೋಣ’ ಎಂಬ ಸಂದೇಶವನ್ನು ಜನರಲ್ಲಿ ಮೂಡಿಸುವುದೇ ರ‍್ಯಾಲಿಯ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.