Friday, July 24, 2026
Join WhatsApp Group
HomeLocal Storyಹೇಳದೆ ಮಾಡುವವ ರೂಢಿಯೊಳಗುತ್ತಮನು...

ಹೇಳದೆ ಮಾಡುವವ ರೂಢಿಯೊಳಗುತ್ತಮನು…

ಕರಡೊಳ್ಳಿ ಗ್ರಾಮದಲ್ಲಿ ಸ್ವಂತ ವೆಚ್ಚದಲ್ಲಿ ಕೊಳವೆ ಬಾವಿ ನಿರ್ಮಿಸಿದ ಉದ್ಯಮಿ ಬಾಲು ನಾಯಕ

ಯಲ್ಲಾಪುರ: ಸಮಾಜಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ನೆರವಾಗುವುದೇ ನಿಜವಾದ ಸೇವೆ ಎಂಬುದನ್ನು ಉದ್ಯಮಿ ಬಾಲಕೃಷ್ಣ (ಬಾಲು) ನಾಯಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಾಲೂಕಿನ ಕರಡೊಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ತಮ್ಮ ಸ್ವಂತ ವೆಚ್ಚದಲ್ಲೇ ಕೊಳವೆ ಬಾವಿ ಕೊರೆಸಿಕೊಡುವ ಮೂಲಕ ಅವರು ಶಾಶ್ವತ ಪರಿಹಾರ ಕಲ್ಪಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕರಡೊಳ್ಳಿ ಗ್ರಾಮದಲ್ಲಿ ವಾಸಿಸುವ ಹಿಂದುಳಿದ ಗೌಳಿ ಸಮುದಾಯದ ಕುಟುಂಬಗಳು ಕುಡಿಯುವ ನೀರಿನ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದವು. ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಗ್ರಾಮದ ಪ್ರಮುಖರು ಹಾಗೂ ಸಾರ್ವಜನಿಕರು ಇತ್ತೀಚೆಗೆ ಬಾಲಕೃಷ್ಣ ನಾಯಕ ಅವರನ್ನು ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದ್ದರು.

ಜನರ ಕಷ್ಟವನ್ನು ಅರಿತುಕೊಂಡ ಬಾಲಕೃಷ್ಣ ನಾಯಕ ಅವರು ವಿಳಂಬ ಮಾಡದೆ ತಮ್ಮದೇ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಸಿಗದೇ ನಿರಾಸೆ ಉಂಟಾದರೂ, ಅದನ್ನೇ ಅಂತಿಮವೆಂದು ಪರಿಗಣಿಸದೆ ಮತ್ತೊಮ್ಮೆ ಹೊಸ ಸ್ಥಳದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾದರು. ಎರಡನೇ ಪ್ರಯತ್ನದಲ್ಲಿ ಸಮೃದ್ಧ ಪ್ರಮಾಣದಲ್ಲಿ ನೀರು ದೊರೆತಿದ್ದು, ಗ್ರಾಮಸ್ಥರ ಹಲವು ವರ್ಷಗಳ ನಿರೀಕ್ಷೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ.

ಸಾಮಾನ್ಯವಾಗಿ ಮೊದಲ ಪ್ರಯತ್ನ ವಿಫಲವಾದರೆ ಕೈಚೆಲ್ಲುವವರೇ ಹೆಚ್ಚು. ಆದರೆ ಗ್ರಾಮಸ್ಥರ ಸಂಕಷ್ಟವನ್ನು ತಮ್ಮದೇ ಸಂಕಷ್ಟವೆಂದು ಭಾವಿಸಿದ ಬಾಲು ನಾಯಕ, ಹಿಂದೆ ಸರಿಯದೇ ಮತ್ತೊಂದು ಕೊಳವೆ ಬಾವಿ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅವರ ಈ ದೃಢ ನಿರ್ಧಾರದಿಂದ ಇಂದು ಕರಡೊಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಾಧ್ಯವಾಗಿದೆ.

ಕೊಳವೆ ಬಾವಿಯಲ್ಲಿ ನೀರು ದೊರೆತ ಸುದ್ದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು. ಗ್ರಾಮಸ್ಥರು ಬಾಲಕೃಷ್ಣ ನಾಯಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ತಮ್ಮ ಬದುಕಿನ ಮಹತ್ವದ ಸಮಸ್ಯೆಯನ್ನು ಪರಿಹರಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ನಾಯಕ, “ಜನರ ಸಮಸ್ಯೆಗೆ ಸ್ಪಂದಿಸುವ ಅವಕಾಶ ಸಿಕ್ಕಿರುವುದೇ ನನಗೆ ದೊಡ್ಡ ಸಂತೋಷ. ಸಮಾಜದ ಒಳಿತಿಗಾಗಿ ಸಾಧ್ಯವಾದಷ್ಟು ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇನೆ. ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ದೊಡ್ಡ ಶಕ್ತಿ,” ಎಂದು ಹೇಳಿದರು.

ಗ್ರಾಮದ ಯುವ ಮುಖಂಡ ಲಕ್ಷ್ಮಣ ಕೋಕರೆ, ಮದನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಟ್ಟು ಶೆಳಕೆ, ಪ್ರಮುಖರಾದ ಶ್ಯಾಮ್ ಸಿಂಧೆ, ಮಹೇಶ್ ದೇಸಾಯಿ, ಚಂದು ಮಾಡಾಕರ್, ವಿಜಯಕುಮಾರ್ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಸಾರ್ವಜನಿಕರು ಪ್ರತಿಕ್ರಿಯಿಸಿ, ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ, ಮೊದಲ ಪ್ರಯತ್ನ ವಿಫಲವಾದರೂ ಹಿಂದೆ ಸರಿಯದೆ ಮತ್ತೊಮ್ಮೆ ಕೊಳವೆ ಬಾವಿ ಕೊರೆಸಿ ಗ್ರಾಮಕ್ಕೆ ನೀರು ಒದಗಿಸಿರುವ ಬಾಲು ನಾಯಕ ಅವರ ಕಾರ್ಯ ನಿಜಕ್ಕೂ ಮಾದರಿಯಾಗಿದೆ. ಇಂತಹ ಸಮಾಜಮುಖಿ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಅಭಿನಂದಿಸಿದರು.

ಗ್ರಾಮಸ್ಥರ ಬದುಕಿನ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಸ್ವಂತ ಹಣದಲ್ಲಿ ಶಾಶ್ವತ ಪರಿಹಾರ ಕಲ್ಪಿಸಿರುವ ಬಾಲಕೃಷ್ಣ (ಬಾಲು) ನಾಯಕ ಅವರ ಈ ಸಮಾಜಮುಖಿ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share