‘ ಚಿನ್ನ ಮಾರಿ ಕಬ್ಬಿಣ ಖರೀದಿಸುತ್ತಿರುವ ರೈತ!
ಒಂದೆರಡು ವರ್ಷಗಳ ಹಿಂದೆ ಮನೆಯ ಮುಂದೆ ತೆಂಗಿನ ಗೆರಟೆ ಬಿದ್ದರೆ, “ಅದನ್ನೆಲ್ಲಾ ಒಂದು ಕಡೆ ಹಾಕಿ ಸುಟ್ಟುಬಿಡ್ರಿ” ಎಂದು ಮನೆಯ ಹಿರಿಯರು ಹೇಳುತ್ತಿದ್ದರು. ಈಗ ಅದೇ ಗೆರಟೆ ಮನೆ ಮುಂದೆ ಕಂಡರೆ ಯಾರಾದರೂ ಗುಜರಿ ಆಯುವವರು ಕದ್ದುಬಿಟ್ಟಾರು ಎಂಬ ಭಯ! ಕಾರಣ, ಹಳ್ಳಿಗಳಲ್ಲಿ ಈಗ ಹೊಸ ವ್ಯಾಪಾರ ಶುರುವಾಗಿದೆ. ಗೆರಟೆ ಖರೀದಿಗೆ ಗಾಡಿಗಳು ಬರುತ್ತಿವೆ. ಕೆಲವೆಡೆ ಸಹಕಾರಿ ಸಂಘಗಳೂ ತೂಕ ಹಾಕಿ ಖರೀದಿಸುತ್ತಿವೆ. ನಿನ್ನೆವರೆಗೆ ಕಸವಾಗಿದ್ದದ್ದು, ಇಂದು ಹಣ ತರುವ ವಸ್ತು!
ಇದು ಒಳ್ಳೆಯ ಬೆಳವಣಿಗೆಯೇ. ಆದರೆ ಒಂದು ಪ್ರಶ್ನೆ ಮಾತ್ರ ಕೇಳಲೇಬೇಕು. ಗೆರಟೆಯನ್ನು ಮಾರುವ ಬಗ್ಗೆ ಇಷ್ಟೊಂದು ಪ್ರಚಾರ ನಡೆಯುತ್ತಿದೆ. ಅದೇ ಗೆರಟೆಯಿಂದ ರೈತರೇ ತಮ್ಮ ಹೊಲಕ್ಕೆ ಉಪಯೋಗವಾಗುವ “ಬಯೋಚಾರ್” ತಯಾರಿಸಬಹುದು ಎಂಬ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ?
ಅಷ್ಟಕ್ಕೂ ಈ ಬಯೋಚಾರ್ ಅಂದ್ರೆ ಏನು? ಅದನ್ನು ಯಾಕೆ “ಕಪ್ಪು ಚಿನ್ನ” ಅಂತ ಕರೀತಾರೆ?
ಇಲ್ಲಿ ಒಂದು ಸಣ್ಣ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಬೆಂಕಿಯಲ್ಲಿ ಸುಟ್ಟರೆ ಬರುವ ಕಲ್ಲಿದ್ದಲು ಚಾರ್ಕೋಲ್. ಆದರೆ ಆಮ್ಲಜನಕದ ಪ್ರವೇಶವನ್ನು ನಿಯಂತ್ರಿಸಿ, ವೈಜ್ಞಾನಿಕ ವಿಧಾನದಲ್ಲಿ ಸಾವಯವ ವಸ್ತುಗಳನ್ನು ಕಾರ್ಬನ್ ರೂಪಕ್ಕೆ ಪರಿವರ್ತಿಸಿ ತಯಾರಿಸುವುದನ್ನು ಬಯೋಚಾರ್ ಎಂದು ಕರೆಯುತ್ತಾರೆ. ನೋಡಲು ಎರಡೂ ಒಂದೇ ರೀತಿ ಕಂಡರೂ, ಕೃಷಿಯಲ್ಲಿ ಬಳಸುವ ಬಯೋಚಾರ್‌ಗೆ ವಿಶೇಷ ಗುಣಗಳಿವೆ.
ತೆಂಗಿನ ಗೆರಟೆಯನ್ನು ನಿಯಂತ್ರಿತ ಉಷ್ಣಾಂಶದಲ್ಲಿ ಸುಟ್ಟಾಗ ಅದರಲ್ಲಿರುವ ಕಾರ್ಬನ್ ಬಹುತೇಕ ಉಳಿಯುತ್ತದೆ. ಇದೇ ಕಾರ್ಬನ್ ಮಣ್ಣಿನಲ್ಲಿ ದಶಕಗಳವರೆಗೆ ಉಳಿದು, ಮಣ್ಣಿನ ರಚನೆಯನ್ನು ಸುಧಾರಿಸಲು ನೆರವಾಗುತ್ತದೆ. ಅದಕ್ಕಾಗಿಯೇ ಜಗತ್ತಿನ ಅನೇಕ ದೇಶಗಳಲ್ಲಿ ಬಯೋಚಾರ್ ಕುರಿತು ಸಂಶೋಧನೆಗಳು ನಡೆಯುತ್ತಿವೆ.
ಆದರೆ ಇಲ್ಲಿ ಒಂದು ಮುಖ್ಯ ಎಚ್ಚರಿಕೆ ಇದೆ. ಬಯೋಚಾರ್ ನೇರ ಗೊಬ್ಬರವಲ್ಲ. ಅದರಲ್ಲಿ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಆದರೆ ಮಣ್ಣಿನ ಗುಣಮಟ್ಟವನ್ನು ಸುಧಾರಿಸುವ “ಮಣ್ಣಿನ ಸ್ನೇಹಿತ” ಎನ್ನಬಹುದು. ಅಂದರೆ, ಸಗಣಿ ಗೊಬ್ಬರ, ಕಾಂಪೋಸ್ಟ್ ಅಥವಾ ಇತರ ಸಾವಯವ ಗೊಬ್ಬರಗಳೊಂದಿಗೆ ಸೇರಿಸಿದಾಗ ಅದರ ಪರಿಣಾಮ ಇನ್ನಷ್ಟು ಉತ್ತಮವಾಗಬಹುದು.
ಮಣ್ಣಿನಲ್ಲಿರುವ ತೇವಾಂಶವನ್ನು ಹೆಚ್ಚು ಹೊತ್ತು ಹಿಡಿದಿಡಲು ಬಯೋಚಾರ್ ಸಹಾಯ ಮಾಡಬಹುದು. ಉತ್ತರ ಕನ್ನಡದಂತಹ ಮಳೆ ಬಂದರೆ ಜೋರು, ನಂತರ ವಾರಗಟ್ಟಲೆ ಬಿಸಿಲು ಬೀಳುವ ಪ್ರದೇಶಗಳಲ್ಲಿ ಇದು ಉಪಯುಕ್ತವಾಗಬಹುದು. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಿಗೆ ಆಶ್ರಯ ಒದಗಿಸುವುದು, ಮಣ್ಣಿನ ಗಾಳಿ ಸಂಚಾರ ಸುಧಾರಿಸುವುದು, ಕೆಲವು ಪೋಷಕಾಂಶಗಳು ಸುಲಭವಾಗಿ ಕೊಚ್ಚಿಹೋಗುವುದನ್ನು ಕಡಿಮೆ ಮಾಡಲು ನೆರವಾಗುವುದು ಇತ್ಯಾದಿ ಪ್ರಯೋಜನಗಳನ್ನು ಹಲವು ಅಧ್ಯಯನಗಳು ಸೂಚಿಸಿವೆ.
ಹಾಗಾದರೆ ಗೆರಟೆಯನ್ನು ಮಾರುವುದು ತಪ್ಪೇ? ಖಂಡಿತಾ ಅಲ್ಲ. ಯಾರಿಗಾದರೂ ತಕ್ಷಣ ಹಣದ ಅಗತ್ಯವಿದ್ದರೆ ಗೆರಟೆ ಮಾರುವುದು ಸಹಜ. ಆದರೆ ಎಲ್ಲ ಗೆರಟೆಯನ್ನೂ ಮಾರಿ, ನಂತರ ಮಣ್ಣಿನ ಫಲವತ್ತತೆ ಹೆಚ್ಚಿಸಲು ದುಬಾರಿ ಉತ್ಪನ್ನಗಳನ್ನು ಖರೀದಿಸುವ ಪರಿಸ್ಥಿತಿ ಬಂದರೆ ಸ್ವಲ್ಪ ಯೋಚಿಸಬೇಕಾಗುತ್ತದೆ.
ಇಂದು ಗೆರಟೆಗೆ ಬೆಲೆ ಬಂದಿದೆ. ನಾಳೆ ಬಯೋಚಾರ್‌ಗೆ ಇನ್ನೂ ಹೆಚ್ಚಿನ ಬೇಡಿಕೆ ಬರಬಹುದು. ಈಗಾಗಲೇ ಕೆಲವು ಉದ್ಯಮಗಳು ತೆಂಗಿನ ಗೆರಟೆಯಿಂದ ಆ್ಯಕ್ಟಿವೇಟೆಡ್ ಕಾರ್ಬನ್, ಫಿಲ್ಟರ್ ವಸ್ತುಗಳು, ಇಂಧನ ಬ್ರಿಕೆಟ್‌ಗಳು, ಬಯೋಚಾರ್ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಉತ್ತಮ ಆದಾಯ ಗಳಿಸುತ್ತಿವೆ.
ಅಂದರೆ, ರೈತರು ಕಚ್ಚಾ ವಸ್ತುವನ್ನು ಮಾತ್ರ ಮಾರುವುದಕ್ಕಿಂತ, ಗ್ರಾಮ ಮಟ್ಟದಲ್ಲೇ ಸಣ್ಣ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ ಹೆಚ್ಚುವರಿ ಆದಾಯವೂ ಸಾಧ್ಯ. ಇದಕ್ಕೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಸಹಕಾರಿ ಸಂಘಗಳು ತರಬೇತಿ ನೀಡಿದರೆ ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯಮಗಳಿಗೂ ದಾರಿ ತೆರೆದುಕೊಳ್ಳಬಹುದು.
ಇತ್ತೀಚೆಗೆ ಅನೇಕ ಸಹಕಾರಿ ಸಂಘಗಳು ಗೆರಟೆ ಖರೀದಿಗೆ ಮುಂದಾಗಿವೆ. ಇದು ಸ್ವಾಗತಾರ್ಹ. ಆದರೆ ಖರೀದಿಯ ಜೊತೆಗೆ ಬಯೋಚಾರ್ ಹೇಗೆ ತಯಾರಿಸಬೇಕು, ಯಾವ ಬೆಳೆಗೆ ಹೇಗೆ ಬಳಸಬೇಕು, ಯಾವ ಪ್ರಮಾಣದಲ್ಲಿ ಹಾಕಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ಕೂಡ ನಡೆಸಿದರೆ ರೈತರಿಗೆ ಇನ್ನಷ್ಟು ಪ್ರಯೋಜನವಾಗುತ್ತದೆ. ಕೇವಲ ವ್ಯಾಪಾರವಲ್ಲ, ಜ್ಞಾನವೂ ಗ್ರಾಮಗಳಿಗೆ ತಲುಪಬೇಕು.
ಆದರೆ ಒಂದು ತಪ್ಪು ಕಲ್ಪನೆ ಬೇಡ. ಬಯೋಚಾರ್ ಹಾಕಿದರೆ ಗೊಬ್ಬರವೇ ಬೇಕಾಗಿಲ್ಲ, ಬೆಳೆ ದುಪ್ಪಟ್ಟಾಗುತ್ತದೆ ಎಂಬ ಅತಿರಂಜಿತ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರವಿಲ್ಲ. ಮಣ್ಣಿನ ಪ್ರಕಾರ, ಬೆಳೆ, ಹವಾಮಾನ, ಬಳಸುವ ವಿಧಾನ ಇವೆಲ್ಲದರ ಮೇಲೆ ಅದರ ಪರಿಣಾಮ ಬದಲಾಗುತ್ತದೆ. ಆದ್ದರಿಂದ ಕೃಷಿ ತಜ್ಞರ ಸಲಹೆಯೊಂದಿಗೆ ಬಳಸುವುದು ಉತ್ತಮ.
ಇಂದಿನ ಕೃಷಿ ಕೇವಲ ಗೊಬ್ಬರ ಸುರಿಯುವ ಕೃಷಿಯಲ್ಲ. ಸಂಪನ್ಮೂಲಗಳನ್ನು ಉಳಿಸಿ, ಮೌಲ್ಯವರ್ಧನೆ ಮಾಡಿ, ಮಣ್ಣನ್ನು ಬದುಕಿಸುವ ಕೃಷಿ. ತೆಂಗಿನ ಗೆರಟೆ ಮಾರಿದರೂ ಲಾಭವೇ. ಆದರೆ ಅದರ ಮೌಲ್ಯವನ್ನು ಅರಿತು ಬಳಸಿದರೆ, ಲಾಭದ ಜೊತೆಗೆ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನೂ ಉಳಿಸಬಹುದು.
ಇಷ್ಟೆಲ್ಲಾ ಇರುವಾಗ, ನಮ್ಮ ಜಿಲ್ಲೆಯ ಕೆಲ ಸಹಕಾರಿ ಸಂಘಗಳು, ರೈತರೇ ಕಟ್ಟಿದ ಸೊಸೈಟಿಗಳು ಕೂಡ ಆತುರಕ್ಕೆ ಬಿದ್ದು ‘ತೆಂಗಿನ ಗೆರಟೆ ಖರೀದಿಸುತ್ತೇವೆ’ ಎಂಬ ಬೋರ್ಡ್ ನೇತುಹಾಕಿದ್ದು ಮಾತ್ರ, ಚಿನ್ನ ಮಾರಿ, ನಮ್ಮಲ್ಲೇ ಕಬ್ಬಿಣ ಖರೀದಿಸಿ ಎನ್ನುತ್ತಿರುವುದರ ಹಿಂದೊಂದು ಕಾಣದ ವಿಚಿತ್ರ ನಗುವಿದೆ!