Saturday, September 19, 2026
Join WhatsApp Group
HomeLocal Newsಮನೆ ಉಳಿಸುವ ಭರವಸೆ ಎಲ್ಲಿಗೆ ಹೋಯಿತು?; ಕಾಂಗ್ರೆಸ್ ಶಾಸಕರ ನಡೆಗೆ ಬಿಜೆಪಿ ಪ್ರಶ್ನೆ

ಮನೆ ಉಳಿಸುವ ಭರವಸೆ ಎಲ್ಲಿಗೆ ಹೋಯಿತು?; ಕಾಂಗ್ರೆಸ್ ಶಾಸಕರ ನಡೆಗೆ ಬಿಜೆಪಿ ಪ್ರಶ್ನೆ

ಶಿರಸಿ: ಗಾಂವಠಾಣ, ರೆವೆನ್ಯೂ ಪಡ, ಅರಣ್ಯ, ಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಅತಿಕ್ರಮಣದ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡುವಂತೆ ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2026ರ ಆಗಸ್ಟ್ 13ರಂದು ಪಂಚಾಯತ್ ರಾಜ್ ಇಲಾಖೆಯಿಂದ ರಾಜ್ಯಾದ್ಯಂತ ಅತಿಕ್ರಮಣದಲ್ಲಿರುವ ಆಸ್ತಿಗಳ ತೆರಿಗೆಯನ್ನು ರದ್ದುಪಡಿಸಿ, ಅವುಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡುವಂತೆ ಹೊರಡಿಸಿರುವ ಸುತ್ತೋಲೆ ಜನವಿರೋಧಿ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ.

ಈ ಆದೇಶವನ್ನು ಹಿಂಪಡೆಯುವಂತೆ ಬಿಜೆಪಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಧಿವೇಶನದ ವೇಳೆ ಎಲ್ಲಾ ಶಾಸಕರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ.

ಆದರೆ, ಆದೇಶ ಹೊರಡಿಸುವ ಸಂದರ್ಭದಲ್ಲಿ ಶಾಸಕರೊಂದಿಗೆ ಯಾವುದೇ ಚರ್ಚೆ ನಡೆಸದೆ, ಇದೀಗ ಅದನ್ನು ಹಿಂಪಡೆಯುವ ವಿಚಾರವನ್ನು ಅಧಿವೇಶನದ ಸಂದರ್ಭದಲ್ಲಿ ಚರ್ಚಿಸುವುದಾಗಿ ಸಚಿವರು ಹೇಳಿರುವುದು ಖಂಡನೀಯ ಎಂದು ಸದಾನಂದ ಭಟ್ ನಿಡುಗೋಡ್ ಟೀಕಿಸಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ಶಾಸಕರು ಈ ಹಿಂದೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದೇಶ ಹಿಂಪಡೆಯಲು ಒತ್ತಾಯಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಸಚಿವರನ್ನು ಭೇಟಿ ಮಾಡಿ ತಕ್ಷಣದ ನಿರ್ಧಾರಕ್ಕೆ ಬರಲಾಗದಿರುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನದಂತಿದೆ ಎಂದು ಅವರು ಆರೋಪಿಸಿದ್ದಾರೆ.ಬಡ ಹಾಗೂ ಸಾಮಾನ್ಯ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಾಂಗ್ರೆಸ್ ಶಾಸಕರು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆದೇಶ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೀವನೋಪಾಯಕ್ಕಾಗಿ ಅತಿಕ್ರಮಣದ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರ ಬದುಕನ್ನು ಬೀದಿಗೆ ತಳ್ಳುವಂತಹ ನೀತಿಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಅತಿಕ್ರಮಣದಾರರ ಹಿತ ರಕ್ಷಣೆಗಾಗಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ “ನಮ್ಮ ಮನೆ, ನಮ್ಮ ಹಕ್ಕು” ಆಂದೋಲನ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share