Monday, September 7, 2026
Join WhatsApp Group
HomeLocal Newsಗ್ರಾಹಕರ ದೂರು ಲೆಕ್ಕಕ್ಕಿಲ್ಲ; ಕೆನರಾ ಬ್ಯಾಂಕ್‌ಗೆ ಬಿತ್ತು ದಂಡ

ಗ್ರಾಹಕರ ದೂರು ಲೆಕ್ಕಕ್ಕಿಲ್ಲ; ಕೆನರಾ ಬ್ಯಾಂಕ್‌ಗೆ ಬಿತ್ತು ದಂಡ

ಕಾರವಾರ: ಸೈಬರ್ ವಂಚನೆಗೆ ಒಳಗಾದ ಗ್ರಾಹಕರ ದೂರಿಗೆ ತಕ್ಷಣ ಸ್ಪಂದಿಸಿ ಹಣ ವರ್ಗಾವಣೆಯನ್ನು ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಬೆಳಕೆ ಶಾಖೆ ಹಾಗೂ ಪ್ರಾದೇಶಿಕ ಕಚೇರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ. 

ವಂಚನೆಗೊಳಗಾದ ₹20.21 ಲಕ್ಷವನ್ನು ಶೇ. 8ರ ಬಡ್ಡಿಯೊಂದಿಗೆ ಮರಳಿಸುವಂತೆ ಹಾಗೂ ಮಾನಸಿಕ ಕಿರುಕುಳ ಮತ್ತು ಪ್ರಕರಣದ ವೆಚ್ಚ ಸೇರಿ ₹35 ಸಾವಿರ ಹೆಚ್ಚುವರಿ ಪರಿಹಾರ ಪಾವತಿಸುವಂತೆ ಸೂಚಿಸಿದೆ.

ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ನಿವಾಸಿ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಜಗದೀಶ ನಾಯ್ಕ ಅವರು ತಮ್ಮ ಕೆನರಾ ಬ್ಯಾಂಕ್ ಓವರ್‌ಡ್ರಾಫ್ಟ್ (OD) ಖಾತೆಯಿಂದ ಅನುಮಾನಾಸ್ಪದವಾಗಿ ಹಣ ಕಡಿತವಾಗಿರುವುದನ್ನು ಗಮನಿಸಿದ ತಕ್ಷಣವೇ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ಜೊತೆಗೆ 1930 ಸೈಬರ್ ಹೆಲ್ಪ್‌ಲೈನ್, ಪ್ರಾದೇಶಿಕ ಕಚೇರಿ ಹಾಗೂ ಪೊಲೀಸರಿಗೂ ದೂರು ನೀಡಿ ಖಾತೆಯನ್ನು ತಕ್ಷಣ ಫ್ರೀಜ್ ಮಾಡುವಂತೆ ಮನವಿ ಮಾಡಿದ್ದರು.

ಆದರೆ, ಗ್ರಾಹಕರ ದೂರಿನ ಬಳಿಕವೂ ಬ್ಯಾಂಕ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದ ಪರಿಣಾಮ, ವಂಚಕರು ₹20.21 ಲಕ್ಷವನ್ನು ಹರಿಯಾಣ ಮೂಲದ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಇದರಿಂದ ನೊಂದ ಜಗದೀಶ ನಾಯ್ಕ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಬ್ಯಾಂಕ್ ಪರ ವಕೀಲರು, ಗ್ರಾಹಕರೇ ಓಟಿಪಿ ಹಾಗೂ ಪಾಸ್‌ವರ್ಡ್ ಬಳಸಿ ವಹಿವಾಟು ನಡೆಸಿದ್ದಾರೆ ಎಂದು ವಾದ ಮಂಡಿಸಿದರೂ, ಆಯೋಗ ಈ ವಾದವನ್ನು ಒಪ್ಪಲಿಲ್ಲ.

ಆಯೋಗದ ಅಧ್ಯಕ್ಷ ಮಾರುತಿ ವಡ್ಡರ್ ಹಾಗೂ ಸದಸ್ಯೆ ನಯನಾ ಕಾಮಟೆ ಅವರಿದ್ದ ಪೀಠ, ಆರಂಭಿಕ ವಂಚನೆಗೆ ಬ್ಯಾಂಕಿನ ನೇರ ಹೊಣೆಗಾರಿಕೆ ಇರದಿದ್ದರೂ, ಗ್ರಾಹಕರು ತಕ್ಷಣ ದೂರು ನೀಡಿದ ನಂತರ ಖಾತೆಯನ್ನು ಫ್ರೀಜ್ ಮಾಡಿ ಮಧ್ಯವರ್ತಿ ಬ್ಯಾಂಕ್ ಮೂಲಕ ಹಣ ತಡೆಗಟ್ಟುವ ಅವಕಾಶ ಇತ್ತು. ಆದರೆ, ಅದನ್ನು ಮಾಡದಿರುವುದು ಬ್ಯಾಂಕ್ ಅಧಿಕಾರಿಗಳ ಸೇವಾ ನಿರ್ಲಕ್ಷ್ಯ ಎಂದು ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಕಳೆದುಕೊಂಡ ₹20.21 ಲಕ್ಷವನ್ನು ಶೇ. 8ರ ಬಡ್ಡಿಯೊಂದಿಗೆ ಮರಳಿಸುವುದರ ಜೊತೆಗೆ, ಮಾನಸಿಕ ಕಿರುಕುಳಕ್ಕಾಗಿ ₹25 ಸಾವಿರ ಹಾಗೂ ಪ್ರಕರಣದ ವೆಚ್ಚವಾಗಿ ₹10 ಸಾವಿರ ಪಾವತಿಸುವಂತೆ ಕೆನರಾ ಬ್ಯಾಂಕ್ ಬೆಳಕೆ ಶಾಖೆಯ ವ್ಯವಸ್ಥಾಪಕರು ಮತ್ತು ಕಾರವಾರ ಪ್ರಾದೇಶಿಕ ವ್ಯವಸ್ಥಾಪಕರಿಗೆ ಜಂಟಿಯಾಗಿ ಆದೇಶ ನೀಡಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share