Thursday, July 23, 2026
Join WhatsApp Group
HomeCrimeಲಂಡನ್‌ ಸುಂದರಿಯ ನೆನೆದು ಕರಗಿದ ಹಣ!

ಲಂಡನ್‌ ಸುಂದರಿಯ ನೆನೆದು ಕರಗಿದ ಹಣ!

ಉಡುಪಿ: ಮೊಬೈಲ್‌ಗೆ ಬಂದ ಒಂದು ಅನಾಮಿಕ ವ್ಯಕ್ತಿಯ ಸಂದೇಶ, ಸ್ನೇಹಪೂರ್ಣ ಮಾತುಗಳು, ವಿದೇಶದಿಂದ ಬರುತ್ತೇನೆ ಎಂಬ ನಂಬಿಕೆ, ನಂತರ ತುರ್ತು ಪರಿಸ್ಥಿತಿ ಹೇಳಿ ಹಣ ಕೇಳುವುದು ಇಂತಹ ಸೈಬರ್ ಮೋಸದ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಿಗೆ ದೊಡ್ಡ ಎಚ್ಚರಿಕೆಯ ಸಂದೇಶವಾಗಿದೆ.

ಕುತ್ಪಾಡಿ ನಿವಾಸಿ, ಮಂಗಳೂರಿನ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿರುವ 62 ವರ್ಷದ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಮೂಲಕ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ತಾನು ಲಂಡನ್ ನಿವಾಸಿ ಎಂದು ಹೇಳಿಕೊಂಡ ಆಕೆ, ಭಾರತದಲ್ಲಿ ವ್ಯವಹಾರ ಮಾಡುತ್ತೇನೆ, ನಿಮ್ಮನ್ನು ಭೇಟಿಯಾಗಲು ಬರುತ್ತೇನೆ ಎಂದು ನಂಬಿಸಿದ್ದಳು. ಕೆಲ ದಿನಗಳ ಮಾತುಕತೆಯ ನಂತರ ವಿಮಾನದ ಟಿಕೆಟ್ ಪ್ರತಿಯನ್ನೂ ಕಳುಹಿಸಿ ವಿಶ್ವಾಸ ಹೆಚ್ಚಿಸಿದ್ದಳು.

ಮುಂದಿನ ಹಂತದಲ್ಲಿ ಮತ್ತೊಬ್ಬ ಮಹಿಳೆ ಕರೆ ಮಾಡಿ, “ನಿಮ್ಮ ಸ್ನೇಹಿತೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರ ಬಳಿ ದೊಡ್ಡ ಮೊತ್ತದ ಡಿಮಾಂಡ್ ಡ್ರಾಫ್ಟ್ ಮತ್ತು ಬೆಲೆಬಾಳುವ ವಸ್ತುಗಳಿವೆ. ಬಿಡುಗಡೆಗೆ ತಕ್ಷಣ ಹಣ ಪಾವತಿಸಬೇಕು” ಎಂದು ಹೇಳಿದ್ದಾಳೆ. ಬಳಿಕ ಅಳುತ್ತಾ ಮಾತನಾಡಿದ ಮಹಿಳೆ ಸಹಾಯ ಕೇಳಿದ ಕಾರಣ, ವ್ಯಕ್ತಿ ಹಣ ಕಳುಹಿಸಿದ್ದಾರೆ.

ಹೀಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ ನಂತರ ಮತ್ತಷ್ಟು ಹಣ ಕೇಳಲಾರಂಭಿಸಿದಾಗ ತನಗೆ ಮೋಸವಾಗಿರುವುದು ಅರಿವಿಗೆ ಬಂದಿದೆ. ತಕ್ಷಣ ಪೊಲೀಸ್‌ ದೂರು ನೀಡಿ ತನ್ನ ಹಣವನ್ನು ಮರಳಿ ಕೊಡಿಸುವಂತೆ ಗೋಗರೆದಿದ್ದಾರೆ.

ಈ ಘಟನೆ ಒಂದೇ ವ್ಯಕ್ತಿಯ ಕಥೆಯಲ್ಲ. ಇಂತಹ ತಂತ್ರಗಳನ್ನು ಕಣ್ಮುಚ್ಚಿ ನಂಬಿ ಅನೇಕರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಈಗ ಸ್ನೇಹ, ಪ್ರೀತಿ, ವಿದೇಶಿ ಸಂಪರ್ಕ, ಉದ್ಯೋಗ, ಹೂಡಿಕೆ, ಬಹುಮಾನ, ತುರ್ತು ನೆರವು ಎಂಬ ನೆಪಗಳಲ್ಲಿ ಜನರನ್ನು ಗುರಿಯಾಗಿಸುತ್ತಿದ್ದಾರೆ.

  • ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳಿಗೆ ತಕ್ಷಣ ನಂಬಿಕೆ ಇಡಬೇಡಿ.
  • ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣದ ಪರಿಚಯಗಳನ್ನು ಪರಿಶೀಲಿಸದೇ ಹಣ ಕಳುಹಿಸಬೇಡಿ.
  • ವಿಮಾನದ ಟಿಕೆಟ್, ಗುರುತಿನ ಚೀಟಿ, ಫೋಟೋ, ವೀಡಿಯೋ ಇವುಗಳನ್ನು ಸುಲಭವಾಗಿ ನಕಲಿ ಮಾಡಬಹುದು ಎಂಬುದನ್ನು ಮರೆಯಬೇಡಿ.
  • “ತಕ್ಷಣ ಹಣ ಕಳುಹಿಸಿ”, “ಇದೀಗ ಸಹಾಯ ಮಾಡಿ”, “ರಹಸ್ಯವಾಗಿಡಿ” ಎನ್ನುವ ಮಾತುಗಳು ಮೋಸದ ಸಾಮಾನ್ಯ ಲಕ್ಷಣಗಳು.
  • ಸ್ಕ್ಯಾನರ್, ಯುಪಿಐ, ಬ್ಯಾಂಕ್ ವರ್ಗಾವಣೆ ಮಾಡುವ ಮೊದಲು ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ.
  • ಅನುಮಾನ ಬಂದ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿ 1930ಗೆ ಸಂಪರ್ಕಿಸಿ.

ಇಂದಿನ ಡಿಜಿಟಲ್ ಯುಗದಲ್ಲಿ ಮೋಸಗಾರರು ಎಂದಿಗೂ ಕಣ್ಣೆದುರು ಬರುವುದಿಲ್ಲ. ಅವರು ಮೊಬೈಲ್ ಸ್ಕ್ರೀನ್‌ ಮೇಲಷ್ಟೇ ಕಾಣಿಸಿಕೊಳ್ಳುತ್ತಾರೆ! ಆದ್ದರಿಂದ ಅಪರಿಚಿತ ಸ್ನೇಹಕ್ಕಿಂತ ಜಾಗ್ರತೆ ಮುಖ್ಯ. ಒಂದು ಕ್ಷಣದ ಎಚ್ಚರಿಕೆ ಲಕ್ಷಾಂತರ ರೂಪಾಯಿ ನಷ್ಟವನ್ನು ತಪ್ಪಿಸಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share