ಗರುಡ ಪುರಾಣದಲ್ಲಿ ಉಲ್ಲೇಖಿಸಿದ ಈ ವಿವರಣೆ ಓದಿ
ಮನುಷ್ಯನಿಗೆ ಹುಟ್ಟಿದ ದಿನದಿಂದಲೇ ಒಂದಲ್ಲ ಒಂದು ಪ್ರಶ್ನೆ ಕಾಡುತ್ತಿರುತ್ತದೆ. “ಸತ್ತ ಮೇಲೆ ಏನಾಗುತ್ತದೆ?” ಉಸಿರು ನಿಂತ ನಂತರ ಎಲ್ಲವೂ ಮುಗಿದು ಹೋಗುತ್ತದೆಯೇ? ಆತ್ಮ ಎಂಬುದು ನಿಜವಾಗಿಯೂ ಇದೆಯೇ? ಸ್ವರ್ಗ-ನರಕ ಎನ್ನುವುದು ಕೇವಲ ಕಲ್ಪನೆಯೇ, ಅಥವಾ ನಿಜವಾಗಿಯೂ ಯಾವುದೋ ಹೊಸ ಪಯಣ ಆರಂಭವಾಗುತ್ತದೆಯೇ? ಈ ಪ್ರಶ್ನೆಗಳಿಗೆ ವಿಜ್ಞಾನ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದ ಗ್ರಂಥವೇ ಗರುಡ ಪುರಾಣ.
ಹಿಂದೂ ಧರ್ಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಮನೆಯಲ್ಲಿ ಗರುಡ ಪುರಾಣವನ್ನು ಓದುವ ಸಂಪ್ರದಾಯ ಇದೆ. ಅದರ ಹಿಂದಿರುವ ಉದ್ದೇಶ ಭಯ ಹುಟ್ಟಿಸುವುದಲ್ಲ. ಬದುಕಿರುವವರಿಗೆ ಜೀವನದ ಅರ್ಥ, ಕರ್ಮದ ಮಹತ್ವ ಮತ್ತು ಸಾವಿನ ನಂತರದ ಪಯಣದ ಬಗ್ಗೆ ಅರಿವು ಮೂಡಿಸುವುದು.
ಗರುಡ ಪುರಾಣದ ಪ್ರಕಾರ, ಮನುಷ್ಯ ಉಸಿರು ನಿಂತ ತಕ್ಷಣ ಕಥೆ ಮುಗಿಯುವುದಿಲ್ಲ. ನಿಜವಾದ ಕಥೆ ಅಲ್ಲಿಂದಲೇ ಆರಂಭವಾಗುತ್ತದೆ!
ಸಾವು ಸಂಭವಿಸಿದ ಕ್ಷಣದಲ್ಲೇ ಯಮಧರ್ಮನ ದೂತರು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುತ್ತಾರೆ ಎಂದು ಪುರಾಣ ಹೇಳುತ್ತದೆ. ಅಲ್ಲಿ ಚಿತ್ರಗುಪ್ತನು ಜೀವನಪೂರ್ತಿ ಮಾಡಿದ ಪ್ರತಿಯೊಂದು ಪುಣ್ಯ-ಪಾಪದ ಲೆಕ್ಕವನ್ನು ಪರಿಶೀಲಿಸುತ್ತಾನೆ. ಇದಕ್ಕೆ ಮೊದಲ 24 ಗಂಟೆಗಳ ಕಾಲ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಆದರೆ ಅಚ್ಚರಿಯ ವಿಷಯವೇನೆಂದರೆ, ಆ ಬಳಿಕ ಆತ್ಮವನ್ನು ಕೂಡಲೇ ಸ್ವರ್ಗಕ್ಕಾಗಲಿ, ನರಕಕ್ಕಾಗಲಿ ಕಳುಹಿಸುವುದಿಲ್ಲ. ಯಮದೂತರು ಅದನ್ನು ಮತ್ತೆ ಭೂಮಿಗೆ, ಅದು ಬದುಕಿದ್ದ ಮನೆ ಹಾಗೂ ದೇಹ ದಹನವಾದ ಸ್ಥಳದ ಸುತ್ತಮುತ್ತಲೇ ಕರೆತರುತ್ತಾರೆ ಎಂಬುದು ಗರುಡ ಪುರಾಣದ ವಿವರಣೆ.
ಮುಂದಿನ ಹತ್ತು ದಿನ ಆತ್ಮವು ಅತ್ಯಂತ ಸೂಕ್ಷ್ಮ ರೂಪದಲ್ಲಿ ಅಲ್ಲಿಯೇ ಇರುತ್ತದೆ. ತನ್ನ ಮರಣದ ಬಳಿಕ ಮನೆಯವರು ಹೇಗೆ ವರ್ತಿಸುತ್ತಿದ್ದಾರೆ, ಯಾರು ಅಳುತ್ತಿದ್ದಾರೆ, ಯಾರು ಶ್ರದ್ಧೆಯಿಂದ ಕರ್ಮ ಮಾಡುತ್ತಿದ್ದಾರೆ, ಯಾರು ಕೇವಲ ಔಪಚಾರಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಇವೆಲ್ಲವನ್ನೂ ಅದು ನೋಡುತ್ತಿರುತ್ತದೆ ಎಂದು ಪುರಾಣ ವರ್ಣಿಸುತ್ತದೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಕುಟುಂಬದವರು ಮಾಡುವ ಪಿಂಡಪ್ರದಾನ, ತರ್ಪಣ ಮತ್ತು ಶ್ರಾದ್ಧವೇ ಆತ್ಮಕ್ಕೆ ಆಹಾರವಾಗುತ್ತದೆ ಎನ್ನುವುದು ಅದರ ನಂಬಿಕೆ.
ಆದ್ದರಿಂದಲೇ ಹಿರಿಯರು “ಸಾವಿನ ನಂತರದ ಕರ್ಮಗಳನ್ನು ಶ್ರದ್ಧೆಯಿಂದ ಮಾಡಬೇಕು” ಎನ್ನುವುದು. ಅದು ಕೇವಲ ಆಚರಣೆಯಲ್ಲ, ಆತ್ಮದ ಮುಂದಿನ ಪಯಣಕ್ಕೆ ನೆರವಾಗುವ ಮಾರ್ಗ ಎಂದು ಪುರಾಣ ವಿವರಿಸುತ್ತದೆ.
11 ಮತ್ತು 12ನೇ ದಿನದ ಕರ್ಮಗಳಿಗೆ ಇನ್ನೊಂದು ವಿಶೇಷ ಅರ್ಥವಿದೆ. ಈ ದಿನಗಳಲ್ಲಿ ಮಾಡುವ ದಾನ, ಧರ್ಮ ಮತ್ತು ವಿಧಿವಿಧಾನಗಳು ಆತ್ಮವನ್ನು ಭೌತಿಕ ವ್ಯಾಮೋಹದಿಂದ ಬಿಡುಗಡೆಗೊಳಿಸಿ ಯಮಲೋಕದ ಅಂತಿಮ ಪಯಣಕ್ಕೆ ಸಿದ್ಧಗೊಳಿಸುತ್ತವೆ ಎಂದು ಹೇಳಲಾಗಿದೆ.
ನಂತರ ಬರುವ 13ನೇ ದಿನವನ್ನು ಹಲವೆಡೆ ವೈಕುಂಠ ಸಮಾರಾಧನೆ ಅಥವಾ ಉತ್ತರಕ್ರಿಯೆ ಎಂದು ಕರೆಯುತ್ತಾರೆ. ಗರುಡ ಪುರಾಣದ ಪ್ರಕಾರ ಇದೇ ದಿನ ಆತ್ಮ ತನ್ನ ನಿಜವಾದ ಪಯಣವನ್ನು ಆರಂಭಿಸುತ್ತದೆ. ಯಮದೂತರು ಅದನ್ನು ಯಮಲೋಕದ ಕಡೆಗೆ ಕರೆದೊಯ್ಯುತ್ತಾರೆ. ಆದರೆ ಅಲ್ಲಿಗೂ ಕ್ಷಣಾರ್ಧದಲ್ಲಿ ತಲುಪುವುದಿಲ್ಲ. ಬದುಕಿನಲ್ಲಿ ಮಾಡಿದ ಕರ್ಮಗಳಿಗೆ ಅನುಗುಣವಾಗಿ ಈ ಪಯಣ 47 ದಿನಗಳಿಂದ ಒಂದು ವರ್ಷದವರೆಗೂ ಮುಂದುವರಿಯಬಹುದು ಎಂದು ಪುರಾಣ ಹೇಳುತ್ತದೆ.
ಇದಕ್ಕಿಂತಲೂ ಕುತೂಹಲಕಾರಿ ಸಂಗತಿಯೊಂದು ಗರುಡ ಪುರಾಣದಲ್ಲಿ ಸಿಗುತ್ತದೆ. ಮರಣಾನಂತರ ಮೊದಲ 13 ದಿನಗಳಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರನ್ನು ಪದೇಪದೇ ಕೂಗುವುದು, ಅತಿಯಾಗಿ ಗೋಳಾಡುವುದು ಅಥವಾ ಅತಿಯಾದ ವ್ಯಾಮೋಹ ತೋರಿಸುವುದು ಆತ್ಮದ ಪಯಣಕ್ಕೆ ಅಡ್ಡಿಯಾಗಬಹುದು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಯಾಕೆಂದರೆ ವ್ಯಾಮೋಹವೇ ಆತ್ಮವನ್ನು ಭೂಮಿಯಲ್ಲಿ ಕಟ್ಟಿಹಾಕುತ್ತದೆ ಎಂಬ ನಂಬಿಕೆ ಇದೆ.
ಹೀಗಾಗಿ ಬದುಕಿರುವಾಗಲೇ ಮೋಹ, ಅಹಂಕಾರ, ದುರಾಸೆಗಳನ್ನು ಕಡಿಮೆ ಮಾಡಿಕೊಂಡು ಸತ್ಕಾರ್ಯಗಳಲ್ಲಿ ತೊಡಗಬೇಕು ಎಂಬ ಸಂದೇಶವನ್ನು ಗರುಡ ಪುರಾಣ ಈ ಕಥನದ ಮೂಲಕ ನೀಡುತ್ತದೆ. ಬದುಕಿನಲ್ಲಿ ಮಾಡಿದ ಪುಣ್ಯವೇ ಸಾವಿನ ನಂತರದ ದಾರಿಯಲ್ಲಿ ಜೊತೆಯಾಗುತ್ತದೆ. ಸಂಪತ್ತು, ಅಧಿಕಾರ, ಹೆಸರು, ಸಂಬಂಧಗಳು ಅಲ್ಲಿಯವರೆಗೆ ಮಾತ್ರ ಎಂಬ ತಾತ್ವಿಕ ಸಂದೇಶವೂ ಇದರೊಳಗೆ ಅಡಗಿದೆ.
ಇಂದು ವಿಜ್ಞಾನವು ಮರಣದ ನಂತರದ ಜೀವನವನ್ನು ಸಾಬೀತುಪಡಿಸಿಲ್ಲ. ಆದರೆ ಒಂದು ವಿಷಯವನ್ನು ಒಪ್ಪಿಕೊಳ್ಳುತ್ತದೆ. ಸಾವು ಎಂಬ ಪ್ರಶ್ನೆ ಮಾನವ ನಾಗರಿಕತೆಯ ಅತ್ಯಂತ ದೊಡ್ಡ ರಹಸ್ಯಗಳಲ್ಲಿ ಒಂದು. ಅದಕ್ಕಾಗಿಯೇ ಈಜಿಪ್ಟಿನ ಪಿರಮಿಡ್‌ಗಳಿಂದ ಹಿಡಿದು ಟಿಬೆಟಿನ Book of the Dead, ಕ್ರೈಸ್ತರ ಸ್ವರ್ಗ-ನರಕದ ಕಲ್ಪನೆ, ಇಸ್ಲಾಂನ ಬರಝಖ್ ಮತ್ತು ಹಿಂದೂ ಧರ್ಮದ ಗರುಡ ಪುರಾಣದವರೆಗೆ ಬಹುತೇಕ ಎಲ್ಲ ಸಂಸ್ಕೃತಿಗಳೂ ಮರಣಾನಂತರದ ಪಯಣದ ಬಗ್ಗೆ ತಮ್ಮದೇ ಆದ ವಿವರಣೆಗಳನ್ನು ನೀಡಿವೆ.
ಹಾಗಾದರೆ, ನಿಜಕ್ಕೂ ಸತ್ತ ನಂತರ ಏನಾಗುತ್ತದೆ? ಅದಕ್ಕೆ ಉತ್ತರ ಯಾರ ಬಳಿಯೂ ಇಲ್ಲ. ಆದರೆ ಗರುಡ ಪುರಾಣದ ಉತ್ತರ ಹೀಗಿದೆ ʻಸಾವು ಅಂತ್ಯವಲ್ಲ. ಅದು ಮತ್ತೊಂದು ಪಯಣದ ಆರಂಭ. ಆ ಪಯಣದ ದಿಕ್ಕನ್ನು ನಿರ್ಧರಿಸುವುದು ಬದುಕಿರುವಾಗ ನಾವು ಮಾಡಿದ ಕರ್ಮಗಳೇ!ʼ
(ಈ ಲೇಖನ ಗರುಡ ಪುರಾಣದಲ್ಲಿರುವ ಧಾರ್ಮಿಕ ನಂಬಿಕೆಗಳು ಮತ್ತು ಪರಂಪರೆಯ ವಿವರಣೆಗಳನ್ನು ಆಧರಿಸಿದೆ. ಇದನ್ನು ವೈಜ್ಞಾನಿಕವಾಗಿ ದೃಢೀಕರಿಸಲಾದ ಸತ್ಯವಲ್ಲ. ಇದು ಹಿಂದೂ ಧಾರ್ಮಿಕ ದೃಷ್ಟಿಕೋನದ ಒಂದು ಆಧ್ಯಾತ್ಮಿಕ ನಿರೂಪಣೆ ಮಾತ್ರ.)