Friday, July 24, 2026
Join WhatsApp Group
HomeInformationSIR; ಹುಷಾರು ಸಾರ್!

SIR; ಹುಷಾರು ಸಾರ್!

‌ಸೈಬರ್‌ ವಂಚಕರ ದಾಳವಾಗಬಹುದು SIR | ಯಾಮಾರಿದರೆ ಬ್ಯಾಂಕ್ ಖಾತೆಯೇ ಖಾಲಿಯಾಗಬಹುದು!

ಒಂದು ಫೋನ್ ಕರೆ ಬರುತ್ತದೆ. “ಸರ್, ಚುನಾವಣಾ ಆಯೋಗದಿಂದ ಮಾತನಾಡುತ್ತಿದ್ದೇವೆ. Special Intensive Revision (SIR) ಪ್ರಕ್ರಿಯೆಯಲ್ಲಿ ನಿಮ್ಮ ಮತದಾರರ ಹೆಸರು ಪರಿಶೀಲನೆಯಲ್ಲಿದೆ. ಈಗಲೇ OTP ಹೇಳದಿದ್ದರೆ ಅಥವಾ ನಾವು ಕಳುಹಿಸುವ ಲಿಂಕ್ ಕ್ಲಿಕ್ ಮಾಡದಿದ್ದರೆ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಹೋಗುತ್ತದೆ…” ಎನ್ನುತ್ತಾರೆ. ಮತದಾನದ ಹಕ್ಕು ಕಳೆದುಕೊಳ್ಳಬಾರದು ಎಂಬ ಆತಂಕದಲ್ಲಿ ಹಲವರು ಯೋಚಿಸದೆ ಮುಂದಿನ ಹಂತಕ್ಕೆ ಹೋಗಿಬಿಡುತ್ತಾರೆ. ಆದರೆ ಅಲ್ಲಿಂದಲೇ ಶುರುವಾಗಬಹುದು ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಕಥೆ!

ದೇಶದ ಕೆಲವು ರಾಜ್ಯಗಳಲ್ಲಿ ಈಗಾಗಲೇ SIR ಹೆಸರಿನಲ್ಲಿ ನಕಲಿ ಕರೆಗಳು, ನಕಲಿ ಲಿಂಕ್‌ಗಳು, APK ಫೈಲ್‌ಗಳನ್ನು ಕಳುಹಿಸಿ ಸೈಬರ್ ವಂಚನೆಗೆ ಯತ್ನಿಸಿರುವ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಇನ್ನೂ ಈ ರೀತಿಯ ದೊಡ್ಡ ಮಟ್ಟದ ವಂಚನೆ ಅಧಿಕೃತವಾಗಿ ವರದಿಯಾಗಿಲ್ಲ. ಆದರೆ ರಾಜ್ಯದಲ್ಲಿ ಈಗ SIR ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದೇ ಹೆಸರನ್ನು ಬಳಸಿಕೊಂಡು ವಂಚಕರು ಸಕ್ರಿಯರಾಗಬಹುದು.

SIR ಅಥವಾ Special Intensive Revision ಎನ್ನುವುದು ಚುನಾವಣಾ ಆಯೋಗ ಕೈಗೊಂಡಿರುವ ಅಧಿಕೃತ ಮತದಾರರ ಪಟ್ಟಿ ಪರಿಷ್ಕರಣೆ. ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಮೃತಪಟ್ಟವರ ಹೆಸರುಗಳು, ಸ್ಥಳಾಂತರಗೊಂಡವರ ವಿವರಗಳನ್ನು ಸರಿಪಡಿಸಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ. ಆದರೆ ಜನರಿಗೆ ಈ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದೇ ವಂಚಕರಿಗೆ ಹೊಸ ಅವಕಾಶವಾಗಬಹುದು.

ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಚುನಾವಣಾ ಆಯೋಗದ ಅಧಿಕಾರಿಗಳು ಅಥವಾ BLO ಎಂದಿಗೂ ನಿಮ್ಮ OTP ಕೇಳುವುದಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ, ATM PIN, UPI PIN ಅಥವಾ Google Pay, PhonePe ಮೂಲಕ ಹಣ ಕೇಳುವುದಿಲ್ಲ. APK ಫೈಲ್ ಕಳುಹಿಸುವುದಿಲ್ಲ. WhatsApp ಮೂಲಕ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಯಾರಾದರೂ ಹೀಗೆ ಕೇಳಿದರೆ ಅದು ಅಧಿಕೃತ ಪ್ರಕ್ರಿಯೆಯಲ್ಲ, ವಂಚನೆಯಾಗಿರುವ ಸಾಧ್ಯತೆಯೇ ಹೆಚ್ಚು.

ಇಂದು ಸೈಬರ್ ವಂಚಕರು ಅತ್ಯಂತ ನೈಪುಣ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಕಲಿ ವೆಬ್‌ಸೈಟ್ ಕೂಡ ಚುನಾವಣಾ ಆಯೋಗದ ತಾಣದಂತೆಯೇ ಕಾಣಬಹುದು. ಸಾಮಾನ್ಯ ವ್ಯಕ್ತಿಗೆ ಅದರ ವ್ಯತ್ಯಾಸ ಗುರುತಿಸುವುದು ಸುಲಭವಲ್ಲ. ಆದ್ದರಿಂದ ಯಾವುದೇ ಅನುಮಾನ ಬಂದರೆ ಸ್ವತಃ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್, ನಿಮ್ಮ BLO ಅಥವಾ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸುವುದು ಸುರಕ್ಷಿತ ಮಾರ್ಗ.

ಸಾಮಾನ್ಯವಾಗಿ ಇಂತಹ ವಂಚನೆಗಳಿಂದ ಪಾರಾಗಲು ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು. ಅಪರಿಚಿತರಿಗೆ OTP ಹೇಳಬೇಡಿ. ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ. APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ. ಬ್ಯಾಂಕ್ ಅಥವಾ UPI ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. “ಈಗಲೇ ಮಾಡದಿದ್ದರೆ ನಿಮ್ಮ ಹೆಸರು ಅಳಿಯುತ್ತದೆ” ಎಂಬ ಬೆದರಿಕೆಗೆ ಎಂದಿಗೂ ಬಗ್ಗಬೇಡಿ. ಅನುಮಾನಾಸ್ಪದ ಕರೆ ಅಥವಾ ಸಂದೇಶ ಬಂದರೆ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ National Cyber Crime Portalನಲ್ಲಿ ದೂರು ದಾಖಲಿಸಿ.

ತಂತ್ರಜ್ಞಾನ ಬೆಳೆದಂತೆ ವಂಚಕರ ತಂತ್ರಗಳೂ ಬದಲಾಗುತ್ತಿವೆ. ನಿನ್ನೆ ಬ್ಯಾಂಕ್ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡುತ್ತಿದ್ದವರು, ಇಂದು ಪೊಲೀಸ್ ಅಧಿಕಾರಿಗಳ ಹೆಸರನ್ನು ಬಳಸುತ್ತಿದ್ದಾರೆ, ನಾಳೆ ಚುನಾವಣಾ ಅಧಿಕಾರಿಗಳ ಹೆಸರನ್ನೂ ಬಳಸಬಹುದು. ಆದ್ದರಿಂದ SIR ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದಿರುವುದು ಅತ್ಯಗತ್ಯ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಯುವುದಕ್ಕಿಂತ ಮೊದಲು, ನಿಮ್ಮ ಮೊಬೈಲ್, ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಮುಖ್ಯ. ಜಾಗೃತಿಯೇ ಸೈಬರ್ ವಂಚನೆ ವಿರುದ್ಧದ ಅತ್ಯಂತ ದೊಡ್ಡ ರಕ್ಷಾಕವಚ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share