ಶಿರಸಿ: ತಾಲೂಕಿನ ದೊಡ್ನಳ್ಳಿ ಸಮೀಪ ಎರಡು ಮೋಟಾರ್ಸೈಕಲ್ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಸೆಪ್ಟೆಂಬರ್ 5ರಂದು ನಡೆದಿದೆ.
ಹಾನಗಲ್ ತಾಲೂಕಿನ ಕೊಂಡೋಜಿಯ ವಿರೂಪಾಕ್ಷ ಪಕೀರಪ್ಪ ಗೆಜ್ಜೆಹಳ್ಳಿ (48) ಗಾಯಗೊಂಡವರಲ್ಲಿ ಒಬ್ಬರಾಗಿದ್ದಾರೆ. ಅವರು ಸೆಪ್ಟೆಂಬರ್ 5ರಂದು ಬೆಳಿಗ್ಗೆ ತಮ್ಮ ಮೋಟಾರ್ಸೈಕಲ್ನಲ್ಲಿ ಬೀಳೂರಿನಿಂದ ದೊಡ್ನಳ್ಳಿ ಮಾರ್ಗವಾಗಿ ಶಿರಸಿ ಕಡೆಗೆ ತೆರಳುತ್ತಿದ್ದರು. ಬೆಳಿಗ್ಗೆ ಸುಮಾರು 9 ಗಂಟೆಗೆ ದೊಡ್ನಳ್ಳಿಯ ಎಸ್.ಎನ್. ಹೆಗಡೆ ಅವರ ಮನೆಯ ಸಮೀಪ ಡಾಂಬರು ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಶಿರಸಿ ಕಡೆಯಿಂದ ದೊಡ್ನಳ್ಳಿ ಕಡೆಗೆ ಬರುತ್ತಿದ್ದ ಅಚನಳ್ಳಿಯ ಜಗದೀಶ ಚಂದನ ಜೋಗಳೇಕರ ಅವರು ಚಲಾಯಿಸುತ್ತಿದ್ದ ಮತ್ತೊಂದು ಮೋಟಾರ್ಸೈಕಲ್ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದು ವಿರೂಪಾಕ್ಷ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಜಗದೀಶ ಅವರ ಬೈಕ್ ರಸ್ತೆಯ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ರಸ್ತೆಯ ಬದಿಯಲ್ಲಿ ಬಿದ್ದಿದೆ.
ಅಪಘಾತದಲ್ಲಿ ವಿರೂಪಾಕ್ಷ ಅವರ ಬಲಗಾಲಿನ ಬೆರಳುಗಳು, ಎರಡೂ ಕೈಗಳು, ತಲೆ ಹಾಗೂ ಮಂಡಿಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊಂದು ಬೈಕ್ ಸವಾರ ಜಗದೀಶ ಅವರಿಗೂ ಕೈ ಹಾಗೂ ಬೆರಳುಗಳಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಎರಡೂ ಮೋಟಾರ್ಸೈಕಲ್ಗಳು ಜಖಂಗೊಂಡಿವೆ.
ಸ್ಥಳೀಯರಾದ ಎಸ್.ಎನ್. ಹೆಗಡೆ ಹಾಗೂ ವಿರೂಪಾಕ್ಷ ಅವರ ಪರಿಚಿತರಾದ ಅನಿಲ್ ದಡ್ಡಿಕೊಪ್ಪ ಅವರು ಗಾಯಾಳುವನ್ನು ಶಿರಸಿಯ ಕೃಪಾ ನರ್ಸಿಂಗ್ ಹೋಮ್ಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಶತಾಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ವಿರೂಪಾಕ್ಷ ಪಕೀರಪ್ಪ ಗೆಜ್ಜೆಹಳ್ಳಿ ನೀಡಿದ ದೂರಿನ ಆಧಾರದ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.