Friday, July 24, 2026
Join WhatsApp Group
HomeLocal Newsʻಬೇರೆ ಆಸ್ಪತ್ರೆಗೆ ಹೋಗಿದ್ದರೆ ನನ್ನ ಮಗ ಬದುಕುತ್ತಿದ್ದ...ʼ

ʻಬೇರೆ ಆಸ್ಪತ್ರೆಗೆ ಹೋಗಿದ್ದರೆ ನನ್ನ ಮಗ ಬದುಕುತ್ತಿದ್ದ…ʼ

ವೈದ್ಯರ ನಿರ್ಲಕ್ಷ್ಯದ ಆರೋಪದೊಂದಿಗೆ ತಂದೆಯ ಕಣ್ಣೀರಿನ ಅಳಲು

ಶಿರಸಿ: ಇತ್ತೀಚೆಗೆ ಹಾವು ಕಡಿತದಿಂದ ಮೃತಪಟ್ಟ ಬಾಲಕ ಮಿಥುನ ಪುಟ್ಟಪ್ಪ ನಾಯ್ಕನ ತಂದೆ ಪುಟ್ಟಪ್ಪ ನಾಯ್ಕ, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯರು ಸರಿಯಾದ ಸಮಯಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದರೆ ನನ್ನ ಮಗ ಬದುಕುತ್ತಿದ್ದ ಎಂದು ಕಣ್ಣೀರಿಟ್ಟಿದ್ದಾರೆ.

ತಮ್ಮ ನೋವನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರ ಎದುರು ಹಂಚಿಕೊಂಡ ಪುಟ್ಟಪ್ಪ ನಾಯ್ಕ, ಘಟನೆಯ ವಿವರವನ್ನು ತಿಳಿಸಿದರು.

ಅವರ ಪ್ರಕಾರ, ರಾತ್ರಿ ವೇಳೆ ಮಕ್ಕಳಿಗೆ ಹಾವು ಕಚ್ಚಿರುವುದು ಕುಟುಂಬದವರಿಗೆ ಗೊತ್ತಾಗಿರಲಿಲ್ಲ. ಇಬ್ಬರು ಮಕ್ಕಳಿಗೂ ವಾಂತಿ ಆರಂಭವಾಗಿದ್ದರಿಂದ ಆಹಾರದಲ್ಲಿ ಏನಾದರೂ ಸಮಸ್ಯೆಯಾಗಿರಬಹುದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಮನೆಯ ಸಮೀಪ ಹಾವು ಹರಿದು ಹೋಗುವುದನ್ನು ಗಮನಿಸಿದ ಬಳಿಕ ಅನುಮಾನ ಮೂಡಿತು. ವಾಂತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬೆಳಗಿನ ಜಾವ ಸುಮಾರು 4.45ಕ್ಕೆ ಮಗ ಹಾಗೂ ಮಗಳನ್ನು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಆಸ್ಪತ್ರೆಗೆ ತಲುಪಿದಾಗ ವೈದ್ಯರು ಇರಲಿಲ್ಲ. ಆಸ್ಪತ್ರೆಯ ಆವರಣದಲ್ಲಿ ಬೀಡಾಡಿ ದನಗಳು ಮಲಗಿದ್ದವು. ಸುಮಾರು ಹತ್ತು ನಿಮಿಷಗಳ ಬಳಿಕ ನಿದ್ರೆಯ ಮಂಪರಿನಲ್ಲಿ ವೈದ್ಯರು ಬಂದರು. ಮಗನ ಕಿವಿಯ ಬಳಿ ಕಚ್ಚಿದ ಗಾಯ ಇರುವುದನ್ನು ಗಮನಕ್ಕೆ ತಂದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾವು ಕಚ್ಚಿರುವ ಸಾಧ್ಯತೆಯನ್ನು ವೈದ್ಯರು ಗುರುತಿಸಲಿಲ್ಲ ಎಂದು ಪುಟ್ಟಪ್ಪ ಆರೋಪಿಸಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ಮಗನ ಆರೋಗ್ಯ ಏಕಾಏಕಿ ಹದಗೆಟ್ಟಿತು. ಆಗ ವೈದ್ಯರು ಕಾರವಾರ ಅಥವಾ ಹುಬ್ಬಳ್ಳಿಗೆ ಕರೆದೊಯ್ಯುವಂತೆ ಹೇಳಿದರು. ಅಲ್ಲಿಂದ ಶಿರಸಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಮಗ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಗಳಿಗೂ ಹಾವು ಕಚ್ಚಿದ್ದು ಗಂಭೀರ ಸ್ಥಿತಿ ಎಂದು ಹೇಳಿದರೂ, ಸೂಕ್ತ ಚಿಕಿತ್ಸೆಯ ಬಳಿಕ ಆಕೆ ಬದುಕುಳಿದಳು. ಮೊದಲೇ ಬೇರೆ ಆಸ್ಪತ್ರೆಗೆ ಹೋಗಿದ್ದರೆ ನನ್ನ ಮಗನೂ ಬದುಕುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.

ಶೀತ-ಜ್ವರಕ್ಕೆ ಸರ್ಕಾರಿ ಆಸ್ಪತ್ರೆಗೆ ಹೋಗಬಹುದು. ಆದರೆ ತುರ್ತು ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋದರೆ ರೋಗಿಗಳು ಬದುಕುವುದು ಕಷ್ಟ. ನನ್ನ ಮಗನಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಆತ ಇಂದು ಬದುಕಿರುತ್ತಿದ್ದ. ನನಗಾದ ದುಃಖ ಮತ್ತಾರಿಗೂ ಆಗಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೃತ ಬಾಲಕನ ಕುಟುಂಬಕ್ಕೆ ಅನಂತಮೂರಿ ಹೆಗಡೆ ಆರ್ಥಿಕ ನೆರವು ನೀಡಿದರು. ಅಲ್ಲದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಮುಂದಿನ ಚಿಕಿತ್ಸೆಗೆ ಹಣಕಾಸಿನ ನೆರವು ಬೇಕಾದರೆ ಯಾವುದೇ ಸಮಯದಲ್ಲಿ ಸಂಪರ್ಕಿಸುವಂತೆ ತಿಳಿಸಿದರು.

(ಈ ವರದಿಯಲ್ಲಿರುವ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳು ಮೃತ ಬಾಲಕನ ತಂದೆ ಮಾಡಿದ ಆರೋಪಗಳಾಗಿದ್ದು, ಸಂಬಂಧಪಟ್ಟ ಆಸ್ಪತ್ರೆ ಅಥವಾ ವೈದ್ಯರಿಂದ ಈ ಕುರಿತು ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.)

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share