ಫಲಿಸಿದ Canara Next ವರದಿ | ಈಗ ಅಕೇಶಿಯಾ ಕಂಬಗಳಿಂದಲೇ ಹೊಸ ಬೇಲಿ
ಯಲ್ಲಾಪುರ: ಜುಲೈ 13ರಂದು Canara Next ಪ್ರಕಟಿಸಿದ್ದ ʻಹೆಮ್ಮರದ ಹೃದಯಕ್ಕೆ ಮೊಳೆ! ಇದು ಅರಣ್ಯ ಸಂರಕ್ಷಣೆ!ʼ ವರದಿಗೆ ಅರಣ್ಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಆ ಪ್ರದೇಶದಲ್ಲಿ ಮರಗಳಿಗೆ ಹೊಡೆದಿದ್ದ ಕಬ್ಬಿಣದ ಮೊಳೆಗಳನ್ನು ತೆರವುಗೊಳಿಸಿ, ಹೊಸದಾಗಿ ಅಕೇಶಿಯಾ ಮರದ ಕಂಬಗಳನ್ನು ಬಳಸಿ ನಿಯಮಾನುಸಾರ ಪುನಃ ಮುಳ್ಳುತಂತಿ ಬೇಲಿ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ.
ವರದಿ ಪ್ರಕಟವಾದ ಬಳಿಕ ಸ್ಥಳೀಯ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರಿಂದಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಇದೀಗ, ಹಿಂದೆ ಜೀವಂತ ಮರಗಳನ್ನೇ ಕಂಬಗಳಾಗಿ ಬಳಸಿದ್ದ ಜಾಗದಲ್ಲಿ ಅವುಗಳನ್ನು ಮುಕ್ತಗೊಳಿಸಿ, ಪ್ರತ್ಯೇಕ ಕಂಬಗಳನ್ನು ನೆಟ್ಟು ಬೇಲಿ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ… https://canaranext.com/forest-conservation-or-cruelty-to-trees-yellapur-barbed-wire-fence/
ಈ ಕುರಿತು ಪ್ರತಿಕ್ರಿಯಿಸಿದ ಯಲ್ಲಾಪುರ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹಿಮವತಿ ಭಟ್, “ಆ ಸಂದರ್ಭದಲ್ಲಿ ಶಾಶ್ವತ ಬೇಲಿ ನಿರ್ಮಾಣಕ್ಕೆ ಸಮರ್ಪಕ ಅನುದಾನ ಲಭ್ಯವಾಗಿರಲಿಲ್ಲ. ನೆಟ್ಟಿದ್ದ ಸಸಿಗಳನ್ನು ದನ–ಕರುಗಳು ತಿನ್ನದಂತೆ ತಾತ್ಕಾಲಿಕವಾಗಿ ಜೀವಂತ ಮರಗಳಿಗೆ ಮುಳ್ಳುತಂತಿ ಕಟ್ಟಲಾಗಿತ್ತು. ಇದೀಗ ಅನುದಾನ ಬಿಡುಗಡೆಯಾಗಿರುವುದರಿಂದ ನಿಯಮಾನುಸಾರ ಬೇಲಿ ನಿರ್ಮಿಸಲಾಗುತ್ತಿದೆ“ ಎಂದು ಸ್ಪಷ್ಟಪಡಿಸಿದರು.
ಈ ಕಾಮಗಾರಿಯ ಮತ್ತೊಂದು ವಿಶೇಷವೆಂದರೆ, ಬೇಲಿಗೆ ಬಳಸುತ್ತಿರುವ ಕಂಬಗಳು ಹೊರಗಿನಿಂದ ತರಲಾಗಿಲ್ಲ. ಅರಣ್ಯ ಇಲಾಖೆಯ ನೆಡುತೋಪಿನಲ್ಲೇ ಬೆಳೆಸಿದ್ದ ಅಕೇಶಿಯಾ ಮರಗಳಿಂದಲೇ ಕಂಬಗಳನ್ನು ತಯಾರಿಸಿ ನೆಡಲಾಗುತ್ತಿದೆ. ಇದರಿಂದ ಜೀವಂತ ಮರಗಳಿಗೆ ಮೊಳೆ ಹೊಡೆಯುವ ಅಗತ್ಯ ತಪ್ಪಿದೆ.
ಅರಣ್ಯ ಸಂರಕ್ಷಣೆಯ ಉದ್ದೇಶ ಎಷ್ಟೇ ಶ್ಲಾಘನೀಯವಾಗಿದ್ದರೂ, ಅದರ ಹೆಸರಿನಲ್ಲಿ ಜೀವಂತ ಮರಗಳಿಗೆ ಹಾನಿಯಾಗಬಾರದು ಎಂಬ ಪ್ರಶ್ನೆಯನ್ನು Canara Next ತನ್ನ ವರದಿಯಲ್ಲಿ ಎತ್ತಿಹಿಡಿದಿತ್ತು. ಈಗ ಅರಣ್ಯ ಇಲಾಖೆ ಅದಕ್ಕೆ ಸ್ಪಂದಿಸಿ ಕ್ರಮ ಕೈಗೊಂಡಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಅರಣ್ಯವನ್ನು ರಕ್ಷಿಸುವಾಗ ಅರಣ್ಯದ ಜೀವಂತ ಮರಗಳನ್ನೂ ಸಮಾನ ಕಾಳಜಿಯಿಂದ ಕಾಪಾಡಬೇಕು ಎಂಬ ಸಂದೇಶಕ್ಕೆ ಈ ಬದಲಾವಣೆ ಉತ್ತಮ ಉದಾಹರಣೆಯಾಗಿದೆ.