Friday, July 24, 2026
Join WhatsApp Group
HomeLocal NewsTMS ಗೆಲುವು ಜಿಲ್ಲೆಯ ಇಡೀ ಸಹಕಾರಿ ಕ್ಷೇತ್ರದ ಗೆಲುವು: ಸಂಸದ ಕಾಗೇರಿ

TMS ಗೆಲುವು ಜಿಲ್ಲೆಯ ಇಡೀ ಸಹಕಾರಿ ಕ್ಷೇತ್ರದ ಗೆಲುವು: ಸಂಸದ ಕಾಗೇರಿ

ಯಲ್ಲಾಪುರ: ತಾಲೂಕಾ ಮಾರ್ಕೆಟಿಂಗ್ ಸೊಸೈಟಿ (ಟಿಎಂಎಸ್) ಚುನಾವಣೆಯಲ್ಲಿ ನೂತನ ಆಡಳಿತ ಮಂಡಳಿ ಸಾಧಿಸಿರುವ ಗೆಲುವು ಕೇವಲ ಸದಸ್ಯರ ಗೆಲುವಲ್ಲ, ಉತ್ತರ ಕನ್ನಡ ಜಿಲ್ಲೆಯ ಇಡೀ ಸಹಕಾರಿ ಕ್ಷೇತ್ರದ ಗೆಲುವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಟಿಎಂಎಸ್ ಚುನಾವಣೆಯಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದ ತಂಡದ ಗೆಲುವಿನ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಹಿತೈಷಿಗಳಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿಯ ಹೆಸರನ್ನು ಹೇಳಿಕೊಂಡು ಸಹಕಾರಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವುದು ವಿಷಾದನೀಯ. ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರಂತಹ ಹಿರಿಯರು ಈ ಗೆಲುವಿಗೆ ಅರ್ಹರಾಗಿದ್ದು, ಸದಸ್ಯರ ಜಾಗೃತ ಮತದಾನದಿಂದ ಈ ಫಲಿತಾಂಶ ಸಾಧ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು, ನೂತನ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.

ಸಹಕಾರಿ ಕ್ಷೇತ್ರಕ್ಕೆ ಜಿಲ್ಲೆಯ ಜನರೊಂದಿಗೆ ಭಾವನಾತ್ಮಕ ಸಂಬಂಧವಿದೆ. ಜನರ ನಿತ್ಯದ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಹಕಾರಿ ಸಂಸ್ಥೆಗಳು ಅಗತ್ಯದ ಸಂದರ್ಭದಲ್ಲಿ ನೆರವಾಗುತ್ತಿವೆ. ಈ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಚುನಾವಣೆ ಘೋಷಣೆಯಾದ ದಿನದಿಂದಲೇ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಸೋಲಿಸಲು ಷಡ್ಯಂತ್ರಗಳು ನಡೆದರೂ, ಸದಸ್ಯರ ಬೆಂಬಲದಿಂದ ನ್ಯಾಯದ ಗೆಲುವಾಗಿದೆ. ಸದಸ್ಯರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ ಎಂದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಉತ್ತರ ಕನ್ನಡ ರಾಜ್ಯದಲ್ಲೇ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದ್ದು, ಈ ಕ್ಷೇತ್ರದ ಮೌಲ್ಯಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಆಡಳಿತ ಮಂಡಳಿ ಇಲ್ಲದ ಅವಧಿಯಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ಮೇಲೆ ತಾಲೂಕಿನ ರೈತರಿಗೆ ಅಪಾರ ವಿಶ್ವಾಸವಿದ್ದು, ನೂತನ ಆಡಳಿತ ಮಂಡಳಿಯ ಮುಂದೆ ಹಲವು ಸವಾಲುಗಳಿವೆ ಎಂದು ಅಭಿಪ್ರಾಯಪಟ್ಟರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಅನೇಕ ಕುತಂತ್ರಗಳ ನಡುವೆಯೂ ಸಂಸ್ಥೆಗೆ ನ್ಯಾಯ ದೊರೆತಿದ್ದು, ಗೆಲುವಿಗೆ ಕಾರಣರಾದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ವಹಿಸಿದ್ದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ಸಹಕಾರಿ ಮುಖಂಡ ಎಲ್.ಟಿ. ಪಾಟೀಲ್ ಸೇರಿದಂತೆ ಹಲವರು ಮಾತನಾಡಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸುದೀಪ್ ಹೆಗಡೆ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ವೆಂಕಟ್ರಮಣ ಭಟ್ ಕಿರಕುಂಬತ್ತಿ ಕಾರ್ಯಕ್ರಮ ನಿರ್ವಹಿಸಿದರು. ವಿನಾಯಕ ಮೆಣಸುಮನೆ ವಂದಿಸಿದರು. ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಸೇರಿದಂತೆ ಸದಸ್ಯರು ಉಪಸ್ತಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share