150ಕ್ಕೂ ಹೆಚ್ಚು ಸಿಬ್ಬಂದಿಗಳ ಕಾರ್ಯಾಚರಣೆಗೆ ಅರಣ್ಯವಾಸಿಗಳ ತೀವ್ರ ವಿರೋಧ
ಸಿದ್ದಾಪುರ: 26 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಪ್ರಸ್ತುತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅರಣ್ಯವಾಸಿಯೊಬ್ಬರ ಸಾಗುವಳಿ ಭೂಮಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ಗುರುವಾರ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ನೂರೈವತ್ತಕ್ಕೂ ಹೆಚ್ಚು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆನ್ನಲ್ಲೇ ಅರಣ್ಯವಾಸಿಗಳು ಮತ್ತು ಹೋರಾಟಗಾರರು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಹೊಸೂರು ಗ್ರಾಮದ ಕೃಷ್ಣ ದ್ಯಾವ ನಾಯ್ಕ ಅವರಿಗೆ ಸಂಬಂಧಿಸಿದ ಅರಣ್ಯ ಸಾಗುವಳಿ ಭೂಮಿಯನ್ನು ತಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು.
ಆದರೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ಬಾಕಿಯಿರುವಾಗಲೇ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಕಾರ್ಯಾಚರಣೆಗೆ ಮುಂದಾಗಿರುವುದು ಕಾನೂನುಬಾಹಿರ ಎಂದು ಅರಣ್ಯವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಕಾರ್ಯಾಚರಣೆ ವೇಳೆ ಮೊದಲು ಸಾಗುವಳಿ ಭೂಮಿಯ ಗಡಿಯನ್ನು ಅಧಿಕೃತವಾಗಿ ದೃಢೀಕರಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಹೋರಾಟಗಾರರ ನಡುವೆ ದೀರ್ಘಕಾಲ ವಾಗ್ವಾದ ನಡೆಯಿತು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ, ತಾಲೂಕು ಸಂಚಾಲಕ ಸಂಕೇತ್ ನಾಯ್ಕ, ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಸೇರಿದಂತೆ ಹಲವರು ಕಾರ್ಯಾಚರಣೆಯನ್ನು ತಡೆದು ಪ್ರಶ್ನಿಸಿದರು.
ಘಟನೆಯ ಇನ್ನೊಂದು ಕುತೂಹಲಕಾರಿ ಬೆಳವಣಿಗೆಯೆಂದರೆ, ತೆರವುಗೊಳಿಸಲು ಗುರುತಿಸಲಾಗಿರುವ ಸರ್ವೆ ನಂ. 51ರ ಭೂಮಿಯನ್ನು ಸರ್ಕಾರದ ದಿಶಾಂಕ (Dishank) ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿದಾಗ ಸರ್ವೆ ನಂ. 159 ಎಂದು ತೋರಿಸುತ್ತಿದೆ ಎಂದು ಹೋರಾಟಗಾರರು ಅಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, “ದಿಶಾಂಕ ದಾಖಲೆಗಳನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿರುವುದಾಗಿ ಹೋರಾಟಗಾರರು ಆರೋಪಿಸಿದರು.
ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾಲ್ಕು ಮೀಸಲು ಪೊಲೀಸ್ ವಾಹನಗಳು ಸೇರಿದಂತೆ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಡಿವೈಎಸ್‌ಪಿ ಗೀತಾ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್, ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ, ಸಿಪಿಐ ಸೀತಾರಾಮ, ಪಿಎಸ್‌ಐ ಶಾಂತಿನಾಥ, ಉಪ ತಹಶೀಲ್ದಾರ್ ಡಿ.ಎಂ. ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿದ್ದರು.
ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಅಂತಿಮವಾಗಿ ಅತಿಕ್ರಮಣ ಪ್ರದೇಶದಲ್ಲಿದ್ದ ಬೇಲಿ, ಗಿಡ-ಮರಗಳನ್ನು ತೆರವುಗೊಳಿಸದೆ, ಹೊರಭಾಗದಲ್ಲಿ ಮಾತ್ರ ಮಾರ್ಕಿಂಗ್ ಮಾಡುವ ಮಟ್ಟಕ್ಕೆ ಕಾರ್ಯಾಚರಣೆಯನ್ನು ಸೀಮಿತಗೊಳಿಸಲಾಯಿತು.
ಇನ್ನೊಂದೆಡೆ, ನಿವೃತ್ತ ಯೋಧನ ಕುಟುಂಬದ ವಿರುದ್ಧ ಇಂತಹ ತೆರವು ಕಾರ್ಯಾಚರಣೆ ನಡೆಸಿರುವುದು ಅಮಾನವೀಯ ಕ್ರಮ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.