ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್
ಯಲ್ಲಾಪುರ: ಮನುಷ್ಯರನ್ನು ಮಾರಾಟ ಮಾಡುವುದು, ಖರೀದಿಸುವುದು ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅನಧಿಕೃತವಾಗಿ ಕಳ್ಳಸಾಗಣೆ ಮಾಡುವುದು ಅತ್ಯಂತ ಗಂಭೀರ ಅಪರಾಧ. ನಮ್ಮ ದೇಶದ ಕಾನೂನಿನಲ್ಲಿ ಮಾನವ ಕಳ್ಳಸಾಗಣೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್. ಹೇಳಿದರು.
ಪಟ್ಟಣದ ವೈಟಿಎಸ್‌ಎಸ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ವಕೀಲ ಪ್ರಕಾಶ್ ಜಿ.ಭಟ್ ಉಪನ್ಯಾಸ ನೀಡಿ, ಮಾನವ ಕಳ್ಳಸಾಗಣೆಯ ಗಂಭೀರತೆಯನ್ನು ಮನಗಂಡು ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನವಾಗಿ ಆಚರಿಸಲು ನಿರ್ಧರಿಸಿದೆ. ಭಾರತದಲ್ಲಿಯೂ ಈ ದಿನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಎಸ್‌ಐ ರಾಜಶೇಖರ ವಂದಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಅನಿತಾ ಕುಮಾರಿ ಎಸ್., ಸರ್ಕಾರಿ ವಕೀಲ ಎನ್.ಟಿ. ಗಾಂವ್ಕರ, ಸಹಾಯಕ ಅಭಿಯೋಜಕ ಚೇತನ್ ಟಿ. ನಾಯ್ಕ, ವಕೀಲ ಸಂದೇಶ್ ಹೆಗಡೆ, ಅರೆಕಾಲಿಕ ಸ್ವಯಂಸೇವಕ ಸಂಜೀವ್ ಕುಮಾರ್ ಹೊಸ್ಕೇರಿ, ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ನಾಗರಾಜ್ ಮದ್ಗುಣಿ ಉಪಸ್ಥಿತರಿದ್ದರು.
ಶಾಲೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಅರೆಕಾಲಿಕ ಸ್ವಯಂಸೇವಕ ಸುಧಾಕರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.