ಗೋಕರ್ಣ: ಪ್ರವಾಸಿ ತಾಣ ಗೋಕರ್ಣದಲ್ಲಿ ಮಾದಕ ವಸ್ತು ಸೇವನೆ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಬಾರಿ ಸಿಕ್ಕಿಬಿದ್ದಿರುವುದು ಸಾಮಾನ್ಯ ವ್ಯಕ್ತಿಗಳಲ್ಲ. ಬೆಂಗಳೂರಿನ ಯುವ ವಕೀಲ ಹಾಗೂ ಐಟಿ ಉದ್ಯೋಗಿ ಗಾಂಜಾ ಅಮಲಿನಲ್ಲಿದ್ದ ಆರೋಪದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಪ್ರಕಾರ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ಅವರ ಒಪ್ಪಿಗೆಯ ಮೇರೆಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ವೈದ್ಯಕೀಯ ಪರೀಕ್ಷೆಯಲ್ಲಿ ಆದಿತ್ಯ ಸಿದರಾಂ ಬಿರಾದರ (29), ವೃತ್ತಿಯಲ್ಲಿ ವಕೀಲ, ಬೆಂಗಳೂರಿನ ನಿವಾಸಿ ಹಾಗೂ ಗೌತಮ್ ಎ. (30), ವೃತ್ತಿಯಲ್ಲಿ ಐಟಿ ಉದ್ಯೋಗಿ, ಬೆಂಗಳೂರಿನ ನಿವಾಸಿ ಈ ಇಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ.
ವರದಿ ಆಧರಿಸಿ, ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗೋಕರ್ಣಕ್ಕೆ ಆಗಮಿಸುವ ಕೆಲ ಪ್ರವಾಸಿಗರಲ್ಲಿ ಮಾದಕ ವಸ್ತು ಬಳಕೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಸೇವನೆ ಅಥವಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.