Thursday, July 23, 2026
Join WhatsApp Group
HomeLocal Newsಐಐಟಿಗೆ ಉತ್ತರ ಕನ್ನಡದ ಯುವ ಪ್ರತಿಭೆ

ಐಐಟಿಗೆ ಉತ್ತರ ಕನ್ನಡದ ಯುವ ಪ್ರತಿಭೆ

ಕಾರವಾರ ಸರ್ಕಾರಿ ಕಾಲೇಜಿನ ಅಕ್ಷಯ್‌ಗೆ ಇಂಟಿಗ್ರೇಟೆಡ್ ಪಿಎಚ್‌ಡಿ ಸೀಟ್

ಕಾರವಾರ: ಸರ್ಕಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೊಬ್ಬ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರವೇಶ ಪಡೆದಿರುವುದು ಜಿಲ್ಲೆಯ ಶಿಕ್ಷಣ ವಲಯದಲ್ಲಿ ಹೆಮ್ಮೆಯ ಸಂಗತಿಯಾಗಿದೆ.

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಬಿ.ಎಸ್‌ಸಿ. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿ ಅಕ್ಷಯ್ ಡಿ. ನಾಯ್ಕ ಅವರು JAM-2026 ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಐಐಟಿ ಭುವನೇಶ್ವರದಲ್ಲಿ ಇಂಟಿಗ್ರೇಟೆಡ್ ಪಿಎಚ್‌ಡಿ (Integrated PhD) ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಈ ಕಠಿಣ ಪರೀಕ್ಷೆಯಲ್ಲಿ ಅಕ್ಷಯ್ ಅವರು ಗಣಿತಶಾಸ್ತ್ರ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 686ನೇ ಸ್ಥಾನ ಹಾಗೂ ಭೌತಶಾಸ್ತ್ರ ವಿಭಾಗದಲ್ಲಿ 1,390ನೇ ಸ್ಥಾನ ಗಳಿಸಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಈ ಸಾಧನೆಯ ಆಧಾರದ ಮೇಲೆ ಅವರಿಗೆ ಐಐಟಿ ಭುವನೇಶ್ವರದಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಸಮಗ್ರ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ದೊರೆತಿದೆ.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೇರವಾಗಿ ಐಐಟಿಯ ಸಂಶೋಧನಾ ಆಧಾರಿತ ಉನ್ನತ ಶಿಕ್ಷಣ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯುವುದು ಅಪರೂಪದ ಸಾಧನೆಯಾಗಿದ್ದು, ಅಕ್ಷಯ್ ಅವರ ಪರಿಶ್ರಮ, ಅಧ್ಯಯನಶೀಲತೆಗೆ ಇದು ಸಾಕ್ಷಿಯಾಗಿದೆ.

ಕಾಲೇಜಿನ ‘ಕೆರಿಯರ್ ಗೈಡನ್ಸ್ ಸೆಲ್’ ವತಿಯಿಂದ ಆಯೋಜಿಸಿದ್ದ JAM-2026 ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ವಿದ್ಯಾರ್ಥಿಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ. ಪರೀಕ್ಷೆಯ ಸ್ವರೂಪ, ಸಿದ್ಧತಾ ವಿಧಾನ ಮತ್ತು ಅಧ್ಯಯನ ತಂತ್ರಗಳ ಕುರಿತು ನೀಡಿದ ಮಾರ್ಗದರ್ಶನವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗಿದೆ.

ಅಕ್ಷಯ್ ಅವರ ಸಾಧನೆ ಕುರಿತು ಕಾಲೇಜಿನ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಜಿಲ್ಲೆಯ ಇತರ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.

“ಐಐಟಿ ಭುವನೇಶ್ವರದಲ್ಲಿ ಇಂಟಿಗ್ರೇಟೆಡ್ ಪಿಎಚ್‌ಡಿ ಮಾಡಲು ಅವಕಾಶ ದೊರೆತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ವಿಜ್ಞಾನಿಯಾಗಿ ಬೆಳೆಯುವ ಆಸೆಯಿದ್ದು, ಭವಿಷ್ಯದಲ್ಲಿ ಇಸ್ರೋದಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿದ್ದೇನೆ,” ಎಂದು ಅಕ್ಷಯ್ ಡಿ. ನಾಯ್ಕ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share