ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 59ನೇ ವರ್ಧಂತಿ ಉತ್ಸವವನ್ನು ಮಂಗಳವಾರ ಭಕ್ತಿ, ಶ್ರದ್ಧೆ ಹಾಗೂ ಸೇವಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. 100ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರೆ, 40ಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯ ಸೇವೆಯಲ್ಲಿ ಪಾಲ್ಗೊಂಡರು.
ಗ್ರಾಮಾಭ್ಯುದಯ, ಟಿಎಸ್‌ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವೈದ್ಯರಾದ ಡಾ. ವೀರೇಶ್ ಎಸ್. ಬಾಲೆಹೊಸೂರು, ಡಾ. ವೀಣಾ ವೆರ್ಣೇಕರ್, ಡಾ. ಸುಮನ್ ಸೇರಿದಂತೆ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಿದರು.
ವರ್ಧಂತಿ ಉತ್ಸವದ ಅಂಗವಾಗಿ ಅಥರ್ವಶೀರ್ಷ ಪಾರಾಯಣ, ಮಹಾಗಣಪತಿ ಹವನ, ಶ್ರೀಸೂಕ್ತ-ಪುರುಷಸೂಕ್ತ ಪಾರಾಯಣ, ಮಹಾಮೃತ್ಯುಂಜಯ ಜಪ, ಗ್ರಹಶಾಂತಿ ಹಾಗೂ ಆಯುಷ್ಯಚರು ಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಪುರೋಹಿತರಾದ ವೇ.ಮೂ. ಕೃಷ್ಣ ಜೋಶಿ, ವೇ.ಮೂ. ಚಿನ್ಮಯ ಜೋಶಿ ಸೇರಿದಂತೆ 50ಕ್ಕೂ ಅಧಿಕ ಋತ್ವಿಜರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಸಂಜೆ ನಡೆದ ಭಕ್ತಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿಯರಾದ ರಾಧಾ ದೇಸಾಯಿ ಮತ್ತು ಅನುರಾಧಾ ಭಟ್ ಭಕ್ತಿಗೀತೆಗಳನ್ನು ಹಾಡಿ ಭಕ್ತರನ್ನು ರಂಜಿಸಿದರು. ಅವರಿಗೆ ಪ್ರಕಾಶ ಹೆಗಡೆ ಹಾಗೂ ಎಂ.ಜಿ. ಭಟ್ಟ ಸಂಗೀತ ಸಾಥ್ ನೀಡಿದರು.
ಗ್ರಾಮಾಭ್ಯುದಯ ಅಧ್ಯಕ್ಷ ರಾಮಚಂದ್ರ ಹೆಗಡೆ ಕಂಚನಳ್ಳಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಹೇಮಂತ ಹೆಗಡೆ, ಎಂ.ಸಿ. ಹೆಗಡೆ ಶಿರಸಿಮಕ್ಕಿ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ ಕಳವೆ, ಆರ್.ಎನ್. ಭಟ್ಟ ಸುಗಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.