Monday, September 7, 2026
Join WhatsApp Group
HomeLocal Newsಅಡಕೆ ಬೆಳೆಗಾರರನ್ನು ಬಲಿ ಕೊಡಬೇಡಿ; ಹರಿಪ್ರಕಾಶ ಕೋಣೆಮನೆ

ಅಡಕೆ ಬೆಳೆಗಾರರನ್ನು ಬಲಿ ಕೊಡಬೇಡಿ; ಹರಿಪ್ರಕಾಶ ಕೋಣೆಮನೆ

ಯಲ್ಲಾಪುರ: ಕರ್ನಾಟಕದಲ್ಲಿ ಗುಟ್ಕಾ ಹಾಗೂ ಪಾನ್‌ ಮಸಾಲಾ ನಿಷೇಧಿಸಲು ಸರ್ಕಾರ ಮುಂದಾಗಿರುವ ಕ್ರಮ ಅಡಕೆ ಬೆಳೆಗಾರರ ಹಿತಕ್ಕೆ ಧಕ್ಕೆಯಾಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅಸಮಾಧಾನ ವ್ಯಕ್ತಪಡಿಸಿದರು.

ಯಲ್ಲಾಪುರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದು, ಇದರಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಕರ್ನಾಟಕದಲ್ಲಿದೆ. ದೇಶದ ಅಡಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.76ಕ್ಕಿಂತ ಹೆಚ್ಚಿದೆ. ಹೀಗಿರುವಾಗ ರಾಜ್ಯದಲ್ಲೇ ಅಡಕೆ ಆಧಾರಿತ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಕ್ರಮದ ಔಚಿತ್ಯ ಅರ್ಥವಾಗುತ್ತಿಲ್ಲ ಎಂದರು.

ಅಡಕೆ ಹಾಗೂ ಅಡಕೆ ಆಧಾರಿತ ಉತ್ಪನ್ನಗಳಿಂದ ವಾರ್ಷಿಕ ಸುಮಾರು ₹496 ಕೋಟಿ ಜಿಎಸ್‌ಟಿ ಆದಾಯ ಸರ್ಕಾರಕ್ಕೆ ಬರುತ್ತಿದೆ. ಸುಮಾರು 1.25 ಕೋಟಿ ಜನರು ಅಡಕೆ ಕೃಷಿ ಹಾಗೂ ಅದರೊಂದಿಗೆ ನೇರ ಅಥವಾ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅಡಕೆ ಬೆಳೆಗಾರರ ಬದುಕಿನ ಮೇಲಿನ ಪರಿಣಾಮವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯಕ್ಕೆ ಹಾನಿಕಾರಕವಾಗಿರುವ ತಂಬಾಕು, ಮದ್ಯ ಹಾಗೂ ಸಿಗರೇಟ್‌ಗಳ ವಿಚಾರದಲ್ಲಿ ಸರ್ಕಾರದ ನಿಲುವು ಏನು ಎಂದು ಪ್ರಶ್ನಿಸಿದ ಅವರು, ನಿಜವಾಗಿಯೂ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಅದರ ಪರಿಣಾಮ ಅಡಕೆ ಬೆಳೆಗಾರರ ಮೇಲೆ ಬೀಳುವ ರೀತಿಯಲ್ಲಿ ನೀತಿ ರೂಪಿಸುವುದು ಸರಿಯಲ್ಲ ಎಂದರು.

ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಅಡಕೆ ಬೆಳೆಗಾರರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಹರಿಪ್ರಕಾಶ ಕೋಣೆಮನೆ ಎಚ್ಚರಿಸಿದರು.

ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್‌ ಪೀಠದ ವ್ಯಾಪ್ತಿಗೆ ಸೇರಿಸುವ ವಿಚಾರಕ್ಕೂ ಅವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಜಿಲ್ಲೆಯ ಜನರಿಗೆ ಸಮಯ ಹಾಗೂ ಹಣದ ಅನಗತ್ಯ ಹೊರೆ ಬೀಳಲಿದೆ ಎಂದರು.

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಯ ಡಿಪಿಆರ್‌ ಸಿದ್ಧವಾಗಿರುವುದು ಜಿಲ್ಲೆಯ ಪಾಲಿಗೆ ಆಶಾದಾಯಕ ಬೆಳವಣಿಗೆ. ಹಲವು ವರ್ಷಗಳ ಕನಸಾಗಿರುವ ಈ ಯೋಜನೆ ಯಾವುದೇ ತೊಡಕಿಲ್ಲದೆ ಮುಂದುವರಿಯಬೇಕು. ರೈಲು ಸಂಪರ್ಕದಿಂದ ಜನರ ಪ್ರಯಾಣದ ಸಮಯ ಉಳಿತಾಯವಾಗುವುದರ ಜತೆಗೆ ರಸ್ತೆ ಅಪಘಾತಗಳ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಲೆನಾಡಿನ ಅಪರೂಪದ ಮಾವಿನ ತಳಿಯಾದ ಅಪ್ಪೆಮಿಡಿಗೆ ಸಾಂಬಾರ ಮಂಡಳಿಯಿಂದ ಜಿಐ ಮಾನ್ಯತೆ ದೊರಕಿಸಲು ಪ್ರಯತ್ನಿಸುತ್ತಿರುವುದಕ್ಕೆ ಮಂಡಲದ ಅಧ್ಯಕ್ಷ ಪ್ರಸಾದ್ ಹೆಗಡೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪ್ರಮುಖ ಉಮೇಶ ಭಾಗ್ವತ್ ಮಾತನಾಡಿ, ಮೊಬೈಲ್ ಟವರ್‌ ಸ್ಥಾಪನೆ, ರೈಲು ಯೋಜನೆ ಸೇರಿದಂತೆ ಜಿಲ್ಲೆಯ ವಿವಿಧ ವಿಚಾರಗಳಲ್ಲಿ ಸಂಸದರು ನಡೆಸುತ್ತಿರುವ ಪ್ರಯತ್ನಗಳನ್ನು ಗುರುತಿಸಿ ಅಭಿನಂದಿಸುವುದು ಪಕ್ಷದ ಕರ್ತವ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖ ರಾಘವೇಂದ್ರ ಭಟ್ ಹಾಸಣಗಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share