Monday, September 7, 2026
Join WhatsApp Group
HomeLocal Newsಅಡುಗೆ ಮನೆಯಿಂದ ಜೆಸಿಬಿ ಕ್ಯಾಬಿನ್‌ವರೆಗೆ…!

ಅಡುಗೆ ಮನೆಯಿಂದ ಜೆಸಿಬಿ ಕ್ಯಾಬಿನ್‌ವರೆಗೆ…!

ಗೃಹಿಣಿ ರೇಷ್ಮಾ ಶೆಟ್ಟಿ ಅವರ ಹೊಸ ಪಯಣ

ಹಳಿಯಾಳ: ‘ಜೆಸಿಬಿ ಓಡಿಸುವುದು ಪುರುಷರ ಕೆಲಸ’ ಎಂಬ ಕಲ್ಪನೆಗೆ ಹಳಿಯಾಳದ ಗೃಹಿಣಿ ರೇಷ್ಮಾ ಶೆಟ್ಟಿ ತಮ್ಮ ಸಾಧನೆಯ ಮೂಲಕ ಹೊಸ ಅರ್ಥ ನೀಡಿದ್ದಾರೆ. ಇಷ್ಟು ದಿನ ಮನೆ ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳಲ್ಲೇ ತೊಡಗಿದ್ದ ಅವರು, ಈಗ ಜೆಸಿಬಿ ಯಂತ್ರದ ಸ್ಟೀರಿಂಗ್ ಹಿಡಿದು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.

ಹೊಸ ಕೌಶಲ್ಯ ಕಲಿಯಬೇಕು, ಸ್ವಂತ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂಬ ದೃಢ ಸಂಕಲ್ಪದಿಂದ ರೇಷ್ಮಾ ಶೆಟ್ಟಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ (RSETI) ಆಯೋಜಿಸಿದ್ದ 30 ದಿನಗಳ ಜೆಸಿಬಿ ಚಾಲನಾ ತರಬೇತಿಗೆ ಸೇರಿದರು. ಆರಂಭದಲ್ಲಿ ಕುತೂಹಲದಿಂದ ತರಬೇತಿಗೆ ಕಾಲಿಟ್ಟ ಅವರು, ಕೇವಲ 15 ದಿನಗಳಲ್ಲೇ ಜೆಸಿಬಿಯ ಕಾರ್ಯವೈಖರಿ, ನಿರ್ವಹಣೆ ಮತ್ತು ಸುರಕ್ಷಿತ ಚಾಲನೆಯ ಕೌಶಲ್ಯವನ್ನು ಆತ್ಮವಿಶ್ವಾಸದಿಂದ ಕಲಿತು ಗಮನ ಸೆಳೆದಿದ್ದಾರೆ.

ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ರೇಷ್ಮಾ ಅವರ ಕಲಿಯುವ ಆಸಕ್ತಿಯನ್ನು ಗಮನಿಸಿದ ಸಂಸ್ಥೆ, ಭಾರಿ ವಾಹನ ಚಾಲನಾ ತರಬೇತಿಗೆ ಅವಕಾಶ ನೀಡಿತ್ತು. ಇಂದು ಅದೇ ಅವಕಾಶ ಅವರ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿದೆ.

ಇಂದಿಗೂ ಅನೇಕ ಮಹಿಳೆಯರು ಭಾರಿ ಯಂತ್ರೋಪಕರಣಗಳ ಚಾಲನೆಯಿಂದ ದೂರವೇ ಉಳಿದಿರುವ ಸಂದರ್ಭದಲ್ಲಿ, ರೇಷ್ಮಾ ಶೆಟ್ಟಿ ಅವರ ಈ ಹೆಜ್ಜೆ ಮಹಿಳೆಯರು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎಂಬ ಸಂದೇಶವನ್ನು ಸಾರುತ್ತಿದೆ. ಕೌಶಲ್ಯಕ್ಕೆ ಲಿಂಗದ ಗಡಿ ಇಲ್ಲ ಎಂಬುದನ್ನು ಅವರ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಕಳೆದ ಐದು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮಂದಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿ ನೀಡಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ, ನಿರುದ್ಯೋಗಿ ಯುವಕ-ಯುವತಿಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಹೊಲಿಗೆ, ಬ್ಯೂಟಿ ಪಾರ್ಲರ್, ಮೊಬೈಲ್ ಹಾಗೂ ಟಿವಿ ರಿಪೇರಿ, ಯಂತ್ರೋಪಕರಣಗಳ ಚಾಲನೆ ಮತ್ತು ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಚಿತ ತರಬೇತಿಗಳನ್ನು ಆಯೋಜಿಸುತ್ತಿದೆ.

ವಿಶೇಷವೆಂದರೆ, ಈ ತರಬೇತಿಗಳಲ್ಲಿ 7ರಿಂದ 30 ದಿನಗಳವರೆಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಉದ್ಯೋಗದ ಹುಡುಕಾಟದಲ್ಲಿರುವ ಯುವಜನರಿಗೆ ಕೌಶಲ್ಯವೇ ಬಂಡವಾಳ ಎಂಬ ನಂಬಿಕೆಯಿಂದ ಸಂಸ್ಥೆ ತರಬೇತಿ ನೀಡುತ್ತಿದೆ.

ರೇಷ್ಮಾ ಶೆಟ್ಟಿ ಅವರ ಕಥೆ ‘ಕಲಿಯುವ ಮನಸ್ಸಿದ್ದರೆ ಅವಕಾಶಗಳು ತಾನಾಗಿಯೇ ಬಾಗಿಲು ತಟ್ಟುತ್ತವೆ’ ಎಂಬ ಸಂದೇಶವನ್ನೂ ಸಾರಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share