ಸವಣಗೆರೆ ರಸ್ತೆಯ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ
ಯಲ್ಲಾಪುರ: ಯಲ್ಲಾಪುರ–ಶಿರಸಿ ರಾಜ್ಯ ಹೆದ್ದಾರಿಯ ಸವಣಗೆರೆ ಸಮೀಪದ ರಸ್ತೆ ಹೊಂಡಗಳ ಸಮಸ್ಯೆಗೆ ಕೊನೆಗೂ ಲೋಕೋಪಯೋಗಿ ಇಲಾಖೆ ಸ್ಪಂದಿಸಿದೆ. ಆದರೆ, ಆರಂಭದಲ್ಲಿ ಹೊಂಡಗಳಿಗೆ ಕೇವಲ ಮಣ್ಣು ಸುರಿದು ಮುಚ್ಚಲು ಮುಂದಾದ ಅಧಿಕಾರಿಗಳಿಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಜಲ್ಲಿ ಹಾಕಿ ತಾತ್ಕಾಲಿಕ ದುರಸ್ತಿ ಕಾಮಗಾರಿ ನಡೆಸಲಾಯಿತು.
ಸವಣಗೆರೆ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಬೃಹತ್ ಗಾತ್ರದ ಹೊಂಡಗಳಿಂದ ವಾಹನ ಸಂಚಾರ ದುಸ್ತರವಾಗಿತ್ತು. ಈ ಕುರಿತು ಸ್ಥಳೀಯ ಸಂಘಟನೆಗಳು, ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದಲ್ಲದೆ, ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು.
ಇದರ ಬೆನ್ನಲ್ಲೇ ಮಂಗಳವಾರ ಬೆಳಗ್ಗೆಯೇ ಇಲಾಖೆ ಸಿಬ್ಬಂದಿ ಹೊಂಡ ಮುಚ್ಚುವ ಕಾಮಗಾರಿ ಆರಂಭಿಸಿದರು. ಆದರೆ ಹೊಂಡಗಳಿಗೆ ಮಣ್ಣು ಸುರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮಳೆಗಾಲದಲ್ಲಿ ಮಣ್ಣು ತುಂಬುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಒಂದು ದಿನವೂ ಮಣ್ಣು ಉಳಿಯುವುದಿಲ್ಲ. ತಾತ್ಕಾಲಿಕವಾದರೂ ಜಲ್ಲಿ ಹಾಕಿ ಹೊಂಡ ಮುಚ್ಚಿ, ಇಲ್ಲವಾದರೆ ಈ ಕಾಟಾಚಾರದ ಕೆಲಸ ನಿಲ್ಲಿಸಿ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿರದಿದ್ದ ಇಂಜಿನಿಯರ್ ಬಳಿಕ ಆಗಮಿಸಿ, ಜಲ್ಲಿ ಹಾಕಿಯೇ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಅದರಂತೆ ಮಧ್ಯಾಹ್ನದ ವೇಳೆಗೆ ಜಲ್ಲಿ ತಂದು ಬೃಹತ್ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
ಇದು ಕೇವಲ ತಾತ್ಕಾಲಿಕ ಕ್ರಮವಾಗಿದ್ದು, ಮಳೆಗಾಲ ಮುಗಿದ ನಂತರ ರಸ್ತೆ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರಸ್ತೆ ವರ್ಷದಿಂದ ವರ್ಷಕ್ಕೆ ಹಾಳಾಗುತ್ತಿದ್ದು, ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯರು ವ್ಯಂಗ್ಯವಾಗಿ ಈ ಪ್ರದೇಶಕ್ಕೆ ‘ಗುಂಡಿಪುರ” ಎಂಬ ಹೆಸರನ್ನೇ ಇಟ್ಟಿದ್ದಾರೆ. ಪ್ರತಿವರ್ಷ ರಸ್ತೆ ಹೊಂಡಗಳಲ್ಲೇ ಗಿಡ ನೆಟ್ಟು ‘ವನಮಹೋತ್ಸವ’ ಆಚರಿಸುವ ಮೂಲಕ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸುತ್ತಿರುವುದು ಈ ರಸ್ತೆಯ ದುಸ್ಥಿತಿಗೆ ಸಾಕ್ಷಿಯಾಗಿದೆ.