ಹೊನ್ನಾವರ: ಮದ್ಯಪಾನ ಮಾಡಿ ಹಾಲಿನ ಟ್ಯಾಂಕರ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಮೇಲೆ ಬಿದ್ದ ಘಟನೆ ತಾಲೂಕಿನ ಆರೋಳ್ಳಿ ಸಮೀಪ ನಡೆದಿದೆ.
ಆರೋಳ್ಳಿ ನಿವಾಸಿ ಶ್ರೀಧರ ದೇವಪ್ಪ ನಾಯ್ಕ (60) ಅವರು ನೀಡಿದ ದೂರಿನ ಆಧಾರದ ಮೇಲೆ ಟ್ಯಾಂಕರ್ ಚಾಲಕ ರಾಕೇಶ ಯಮನಪ್ಪ ಇಳಿಗಾರ (31) ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಆ.26ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ರಾಕೇಶ ಅವರು ಹಾಲಿನ ಟ್ಯಾಂಕರ್ ಕೆಎ-51/ಎಸಿ-5853ನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರದತ್ತ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ರಾಕೇಶ ಮದ್ಯಪಾನ ಮಾಡಿದ್ದಲ್ಲದೆ, ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಳ್ಳಿ ಸಮೀಪದ ರಸ್ತೆ ತಿರುವು ಹಾಗೂ ಇಳಿಜಾರಿನಿಂದ ಕೂಡಿದ್ದರೂ ವೇಗವನ್ನು ನಿಯಂತ್ರಿಸದೆ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಟ್ಯಾಂಕರ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ.
ಪಲ್ಟಿಯಾದ ಟ್ಯಾಂಕರ್ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಶ್ರೀಧರ ನಾಯ್ಕ ಅವರ ಡಿಯೋ ಬೈಕ್ (ಕೆಎ-47/ಯು-6086) ಮೇಲೆ ಬಿದ್ದ ಪರಿಣಾಮ ಬೈಕ್ ಜಖಂಗೊಂಡಿದೆ.
ಮದ್ಯಪಾನ ಮಾಡಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.