ಶಿರಸಿ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ನೀರು ಹರಿಯುವ ಕಾಲುವೆಗೆ ಬಿದ್ದ ಪರಿಣಾಮ ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಡೆಗದ್ದೆ ಸಮೀಪ ನಡೆದಿದೆ.
ಆ.25ರಂದು ಸಂಜೆ ಸುಮಾರು 5.20ರ ವೇಳೆಗೆ ಕಾರ್ತಿಕ ರಮೇಶ ಗಾಂವಕರ (19) ಎಂಬಾತ ಕೆಎ-31/ಇಎಚ್-3677 ಸಂಖ್ಯೆಯ ಸ್ಕೂಟರ್ನಲ್ಲಿ ಬೆಡೆಗದ್ದೆ ಕಡೆಯಿಂದ ಗಣೇಶ ನಗರದತ್ತ ತೆರಳುತ್ತಿದ್ದ. ಸ್ಕೂಟರ್ನಲ್ಲಿ ಶರತ ಶಂಕರ ಗಾಂವಕರ (20) ಹಿಂಬದಿ ಸವಾರನಾಗಿ ಕುಳಿತಿದ್ದರು.
ಬೆಡೆಗದ್ದೆ ಸಮೀಪ ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಕಾರ್ತಿಕನ ನಿಯಂತ್ರಣ ತಪ್ಪಿದ್ದು, ಸ್ಕೂಟರ್ ರಸ್ತೆಯ ತೀರಾ ಎಡಭಾಗಕ್ಕೆ ಚಲಿಸಿ ನೀರು ಹರಿಯುವ ಕಾಲುವೆಗೆ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಹಿಂಬದಿ ಸವಾರ ಶರತ ಅವರ ಬಲಗಾಲಿನ ಮೊಣಗಂಟಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಎಡಗೆನ್ನೆಗೂ ತೆರಚಿದ ಗಾಯವಾಗಿದೆ. ಸ್ಕೂಟರ್ ಚಾಲಕ ಕಾರ್ತಿಕ ಅವರಿಗೂ ಬಲಗಾಲಿಗೆ ಒಳನೋವು ಉಂಟಾಗಿದೆ.
ಘಟನೆ ಕುರಿತು ದೂರು ಸ್ವೀಕರಿಸಿರುವ ಶಿರಸಿ ಗ್ರಾಮೀಣ ಪೊಲೀಸರು, ಸ್ಕೂಟರ್ ಚಾಲಕ ಕಾರ್ತಿಕ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.