ಹೊನ್ನಾವರ: ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ ನೋವಿನಿಂದ ಮನನೊಂದಿದ್ದಾನೆ ಎನ್ನಲಾದ 24 ವರ್ಷದ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡದ ರಾಮನಗರದಲ್ಲಿ ನಡೆದಿದೆ.
ಮೃತನನ್ನು ಹರೀಶ ಗಣಪತಿ ಮೇಸ್ತಾ (24) ಎಂದು ಗುರುತಿಸಲಾಗಿದೆ. ಆತ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಮೃತನ ಸಹೋದರ ಗೌರೀಶ ಗಣಪತಿ ಮೇಸ್ತಾ ನೀಡಿದ ದೂರಿನ ಪ್ರಕಾರ, ಹರೀಶ ತಾನು ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಅಥವಾ ಇನ್ನಾವುದೇ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಎನ್ನಲಾಗಿದೆ.
ಇದೇ ಹಿನ್ನೆಲೆಯಲ್ಲಿ ಜುಲೈ 29ರಂದು ಮುಂಜಾನೆ 2ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಕೋಣೆಯೊಳಗೆ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.