ಯಲ್ಲಾಪುರದ 20 ವರ್ಷಗಳ ಹೋರಾಟಕ್ಕೆ ಜಯ
ಯಲ್ಲಾಪುರ: ಹಲವು ವರ್ಷಗಳ ನಿರಂತರ ಹೋರಾಟದ ಬಳಿಕ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಮತ್ತೆ ಕಾರ್ಯರೂಪದ ಹಾದಿಗೆ ಮರಳಿರುವುದಕ್ಕೆ ಹುಬ್ಬಳ್ಳಿ–ಅಂಕೋಲಾ ರೈಲು ಹೋರಾಟ ಸಮಿತಿ ಹಾಗೂ ನಾಗರಿಕ ವೇದಿಕೆ ಪರವಾಗಿ ಕೇಂದ್ರ ಸರ್ಕಾರಕ್ಕೆ ಹುಬ್ಬಳ್ಳಿ–ಅಂಕೋಲಾ ರೈಲು ಹೋರಾಟ ಸಮಿತಿ ಯಲ್ಲಾಪುರದ ಸಂಚಾಲಕ ಹಾಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಹುಬ್ಬಳ್ಳಿ–ಅಂಕೋಲಾ ಯೋಜನೆ’ ಎಂಬ ಹೆಸರಿದ್ದರೂ ಹುಬ್ಬಳ್ಳಿ ಹಾಗೂ ಅಂಕೋಲಾ ಈಗಾಗಲೇ ರೈಲು ಸಂಪರ್ಕ ಹೊಂದಿವೆ. ಈ ಎರಡರ ನಡುವಿನ ಯಲ್ಲಾಪುರ ಮಾತ್ರ ಇಷ್ಟು ವರ್ಷ ರೈಲು ಸಂಪರ್ಕದಿಂದ ವಂಚಿತವಾಗಿತ್ತು. ಕಲಘಟಗಿವರೆಗೆ ಬಂದಿದ್ದ ಯೋಜನೆ 2006ರಲ್ಲಿ ಯಲ್ಲಾಪುರ ತಾಲೂಕು ಪ್ರವೇಶಿಸುವ ಹಂತದಲ್ಲಿ ಪರಿಸರ ಸಂಬಂಧಿತ ಕಾರಣಗಳಿಂದ ಸ್ಥಗಿತಗೊಂಡಿತ್ತು.
ಯೋಜನೆ ಎರಡು ದಶಕಗಳ ಕಾಲ ಸ್ಥಗಿತಗೊಂಡಿದ್ದರಿಂದ ಯೋಜನಾ ವೆಚ್ಚವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ 20 ವರ್ಷಗಳಲ್ಲಿ ವೆಚ್ಚ ಸುಮಾರು ಐವತ್ತು ಪಟ್ಟು ಹೆಚ್ಚಾಗಿದೆ. ಇನ್ನಾದರೂ ಯಾವುದೇ ಅಡೆತಡೆಗಳಿಲ್ಲದೆ ಯೋಜನೆ ಮುಂದುವರಿದು ಶೀಘ್ರ ಪೂರ್ಣಗೊಳ್ಳಬೇಕು ಎಂಬ ಆಶಯವನ್ನು ರಾಮು ನಾಯ್ಕ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ನೇರವಾಗಿ ಸಂಪರ್ಕಿಸುವ ಈ ರೈಲು ಮಾರ್ಗ ಮುಂದಿನ ದಿನಗಳಲ್ಲಿ ದೇಶದ ರಕ್ಷಣಾ ವಲಯಕ್ಕೂ ಮಹತ್ವದ ಸಂಪರ್ಕ ಮಾರ್ಗವಾಗುವ ಸಾಧ್ಯತೆ ಇದೆ. ಹೀಗಾಗಿ ಯೋಜನೆಯ ಅನುಷ್ಠಾನ ವೇಗ ಪಡೆದುಕೊಳ್ಳುವುದು ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಗೆ ಆರಂಭದಿಂದಲೂ ನಿರಂತರವಾಗಿ ಪ್ರಯತ್ನ ನಡೆಸಿದ ದಿವಂಗತ ರಮಾನಂದ ನಾಯಕ ಅಂಕೋಲಾ, ದಿವಂಗತ ಮಾಧವ ಬಾಳಗಿ ಯಲ್ಲಾಪುರ, ಯಲ್ಲಾಪುರದ ಸಂಚಾಲಕ ಮಹಾರುದ್ರಪ್ಪ ನೆಲ್ಲಿಗಣಿ, ಹಾಲಿ ರೈಲು ಸೇವಾ ಸಮಿತಿಯ ರಾಜೀವ ಗಾಂವ್ಕರ್ ಕುಮಟಾ, ಜಾರ್ಜ್ ಫರ್ನಾಂಡೀಸ್ ಕಾರವಾರ ಹಾಗೂ ಅವರ ಬಳಗದ ಸೇವೆಯನ್ನು ರಾಮು ನಾಯ್ಕ ಸ್ಮರಿಸಿ ಅಭಿನಂದನೆ ಸಲ್ಲಿಸಿದ್ದಾರೆ.