ಯಲ್ಲಾಪುರ: ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪ ಮಜರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದ್ದು, ಹೊಸದಾಗಿ ಕೊರೆದ ಬೋರ್‌ವೆಲ್‌ನಲ್ಲಿ 3 ಇಂಚು ನೀರು ದೊರೆತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಬೇಸಿಗೆ ಅವಧಿಯಲ್ಲಿ ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎರಡು ಬೋರ್‌ವೆಲ್‌ಗಳನ್ನು ಕೊರೆದಿದ್ದರೂ ನೀರು ಸಿಗದೆ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಾದ ವಿನಾಯಕ್ ತಿನ್ನೇಕರ, ಸಂಜಯ್ ತಿನ್ನೇಕರ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೇಶ್ ತಿನ್ನೇಕರ, ಪಾಂಡು ಶಿಂಧೆ, ಮಾರುತಿ ಕಳಸೂರಕರ, ಬಸವರಾಜ ಕಳಸೂರಕರ, ರಿಗನ್ ಡಿಸೋಜಾ ಸೇರಿದಂತೆ ಗ್ರಾಮದ ಹಿರಿಯರು ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಜಿ.ಪಂ ಮಾಜಿ ಸದಸ್ಯ ವಿಜಯ್ ಮಿರಾಶಿ ಅವರ ಗಮನಕ್ಕೆ ತಂದಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ವಿಜಯ್ ಮಿರಾಶಿ ಅವರು ತಕ್ಷಣವೇ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಂಡಿದ್ದರು. ಅದರಂತೆ ಹುಣಶೆಟ್ಟಿಕೊಪ್ಪದಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ 3 ಇಂಚು ನೀರು ದೊರೆತಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಮೂಡಿದೆ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತ್ವರಿತ ಕ್ರಮ ಕೈಗೊಂಡ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ವಿಜಯ್ ಮೀರಾಶಿ ಅವರಿಗೆ ಹುಣಶೆಟ್ಟಿಕೊಪ್ಪದ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.