Friday, July 24, 2026
Join WhatsApp Group
HomeLocal Newsಯಲ್ಲಾಪುರ ಟಿಎಂಎಸ್‌ | ಹೈಕೋರ್ಟ್ ತೀರ್ಪು ರೈತ ಸಮುದಾಯದ ಗೆಲುವು

ಯಲ್ಲಾಪುರ ಟಿಎಂಎಸ್‌ | ಹೈಕೋರ್ಟ್ ತೀರ್ಪು ರೈತ ಸಮುದಾಯದ ಗೆಲುವು

ಯಲ್ಲಾಪುರ: ಹೈಕೋರ್ಟ್‌ನ ವಿಭಾಗೀಯ ದ್ವಿಸದಸ್ಯ ಪೀಠ ನೀಡಿರುವ ತೀರ್ಪು ನನ್ನ ವೈಯಕ್ತಿಕ ಗೆಲುವಲ್ಲ, ಸಮಸ್ತ ರೈತ ಸಮುದಾಯದ ವಿಜಯವಾಗಿದೆ ಎಂದು ಟಿಎಂಎಸ್ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಪಟ್ಟಣದ ಟಿಎಂಎಸ್ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಇನ್ನೂ ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೆ. ಚುನಾವಣೆಯ ಬಳಿಕ ನಡೆದ ಕಾನೂನು ಹೋರಾಟಗಳ ಬಗ್ಗೆ ಜಿಲ್ಲೆಯ ರೈತರಿಗೆ ಸಂಪೂರ್ಣ ಅರಿವಿದೆ. ನನ್ನ ಬಳಿ ಹಣಬಲ ಇರದಿರಬಹುದು. ಆದರೆ ರೈತ ಸಮುದಾಯದ ಬೆಂಬಲ ನನ್ನೊಂದಿಗಿದೆ ಎಂಬ ನಂಬಿಕೆಯೊಂದಿಗೆ ಸ್ಪರ್ಧೆ ಮಾಡಿದ್ದೆ. ಈ ತೀರ್ಪು ಸಹಕಾರಿ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ರೈತರ ಹಕ್ಕುಗಳಿಗೆ ಸಂದ ಜಯವಾಗಿದ್ದು, ರೈತ ಸಮುದಾಯದ ವಿಶ್ವಾಸಕ್ಕೆ ದೊರೆತ ನ್ಯಾಯವಾಗಿದೆ ಎಂದು ಹೇಳಿದರು.

ಸಂಸ್ಥೆ ನಡೆಸಿದ ಕಾನೂನು ಹೋರಾಟದ ಬಗ್ಗೆ ವಿವರಿಸಿದ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಟಿಎಂಎಸ್ ಸಂಸ್ಥೆಯ ಚುನಾವಣಾ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಬಳಿಕ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ಧಾರವಾಡದ ವಿಭಾಗೀಯ ದ್ವಿಸದಸ್ಯ ಪೀಠ ಅಂತಿಮ ತೀರ್ಪು ನೀಡಿದೆ. ಆ ತೀರ್ಪಿನಂತೆ, ಸಂಘದ ‘ಅ’ ಹಾಗೂ ‘ಬ’ ವರ್ಗದ ಸದಸ್ಯರ ಮತಗಳನ್ನು ಒಟ್ಟುಗೂಡಿಸಿ, ಸಂಘದ ಬೈಲಾ ಪ್ರಕಾರ ಮತ ಎಣಿಕೆ ನಡೆಸಿ ಒಂದು ವಾರದೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಇಡಗುಂದಿ ಸೇವಾ ಸಹಕಾರಿ ಸಂಘ, ದೇಹಳ್ಳಿ ಸೇವಾ ಸಹಕಾರಿ ಸಂಘ ಮತ್ತು ಕಿರವತ್ತಿ ಸೇವಾ ಸಹಕಾರಿ ಸಂಘ ಹಾಗೂ ಗಜಾನನ ಗಣಪತಿ ಭಟ್ಟ ಕಳಚೆ, ಆರ್.ಎಲ್. ಭಟ್ಟ ಕುಂಬಾರಕುಳಿ ಇವರು ಜನರಿಂದ ಆಯ್ಕೆಯಾಗುವ ಪದ್ಧತಿಯನ್ನು ರದ್ದುಗೊಳಿಸಿ ಕೇವಲ ಪ್ರಾಥಮಿಕ ಸಹಕಾರಿ ಸಂಘಗಳಿಂದ ಸಂಘದ ‘ಅ’ ವರ್ಗದ ನಿರ್ದೇಶಕರನ್ನು ಆಯ್ಕೆ ಮಾಡಲು ನಿರ್ದೇಶನ ನೀಡುವಂತೆ ಕೋರಿದ್ದರು.

ರೈತರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶದಿಂದ ಬರೆದ ಪತ್ರ ಇದಾಗಿದ್ದರಿಂದ ಇದನ್ನು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಣಯಿಸಿ ರಿಟ್ ದಾಖಲಿಸಲಾಗಿತ್ತು.

ವಿಚಾರಣೆಯ ಪ್ರತಿ ಹಂತದಲ್ಲೂ ಬೇರೆ ಬೇರೆ ಕಾರಣವನ್ನು ನೀಡಿ ವಿಚಾರಣೆಯನ್ನು ಮುಂದೂಡುವ ಪ್ರಯತ್ನವನ್ನು ಮಾಡಲಾಯಿತು. ನ್ಯಾಯಾಲಯದಿಂದ ಅಂತಿಮ ನಿರ್ಣಯ ಬಂದು ಮೂರು ಸಹಕಾರಿ ಸಂಘಗಳು ದಾಖಲಿಸಿದ ಎಲ್ಲಾ ಪ್ರಕರಣವನ್ನು ವಜಾಗೊಳಿಸಿ 10 ದಿನಗಳೊಳಗಾಗಿ ಮತ ಎಣಿಕೆ ಮಾಡಲು ಏಕಸದಸ್ಯ ಪೀಠ ಆದೇಶಿಸಿತ್ತು. ಆದರೆ, ಪುನಃ ಧಾರವಾಡದ ದ್ವಿಸದಸ್ಯ ಪೀಠದಲ್ಲಿ ಈ ಅದೇಶವನ್ನು ಪ್ರಶ್ನಿಸಿ ತಡೆಯಾಜ್ಞೆ ತರಲಾಗಿತ್ತು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಭಟ್‌ ಹಾಸಣಗಿ, ವಿಘ್ನೇಶ್ವರ ಮೆಣಸುಮನೆ, ಸುಬ್ಬಣ್ಣ ಬೋಳ್ಮನೆ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ ಹಾಜರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share