Saturday, June 13, 2026
HomeYour Voiceವೇಗದ ಜಗತ್ತಿಗೆ ವಚನ ಸಾಹಿತ್ಯದ ಅಗತ್ಯ

ವೇಗದ ಜಗತ್ತಿಗೆ ವಚನ ಸಾಹಿತ್ಯದ ಅಗತ್ಯ

ಇಂದಿನ ವೇಗದ ಯುಗದಲ್ಲಿ ಮಾನವನು ವಿಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ ಮುಂದೆ ಸಾಗುತ್ತಿದ್ದಾನೆ. ಆದರೆ ಮಾನವೀಯ ಮೌಲ್ಯಗಳಲ್ಲಿ ಹಿಂದೆ ಬೀಳುತ್ತಿದ್ದಾನೆ. ಹಣ, ಅಧಿಕಾರ, ಸ್ಪರ್ಧೆ, ಸ್ವಾರ್ಥ ಇವುಗಳ ನಡುವೆ ಪ್ರೀತಿ, ಸತ್ಯ, ಸಹನೆ, ಸಮಾನತೆ, ಕರುಣೆ ಎಂಬ ಜೀವನ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ದಾರಿ ತೋರಿಸುವ ಬೆಳಕಾಗಿ ಕಾಣಿಸುವುದು ವಚನ ಸಾಹಿತ್ಯ.

12ನೇ ಶತಮಾನದಲ್ಲಿ ಹುಟ್ಟಿದ ವಚನ ಚಳವಳಿ ಕೇವಲ ಸಾಹಿತ್ಯ ಚಳವಳಿಯಲ್ಲ; ಅದು ಸಮಾಜ ಪರಿವರ್ತನೆಯ ಕ್ರಾಂತಿ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರು ವಚನಗಳ ಮೂಲಕ ಸಮಾಜದಲ್ಲಿದ್ದ ಅಂಧಶ್ರದ್ಧೆ, ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದರು. ಅವರು ಹೇಳಿದ ಸಂದೇಶಗಳು ಇಂದಿಗೂ ಜೀವಂತವಾಗಿವೆ.

ಬಸವಣ್ಣನ ಕಾಯಕವೇ ಕೈಲಾಸ ಎಂಬ ತತ್ವ ಇಂದಿನ ಯುವಜನತೆಗೆ ಅತ್ಯಂತ ಅಗತ್ಯವಾಗಿದೆ. ದುಡಿಮೆಗಿಂತ ಬೇರೆ ಮಾರ್ಗವನ್ನು ಹುಡುಕುತ್ತಿರುವ ಕಾಲದಲ್ಲಿ, ಪ್ರಾಮಾಣಿಕ ದುಡಿಮೆ ಮತ್ತು ಸ್ವಾವಲಂಬನೆಯ ಮಹತ್ವವನ್ನು ವಚನಗಳು ತಿಳಿಸುತ್ತವೆ. ದಾಸೋಹ ತತ್ವ ಸಮಾಜದಲ್ಲಿ ಹಂಚಿಕೊಳ್ಳುವ ಮನೋಭಾವ ಮತ್ತು ಸಹಕಾರದ ಮಹತ್ವವನ್ನು ಸಾರುತ್ತದೆ.

ವಚನ ಸಾಹಿತ್ಯದ ಮತ್ತೊಂದು ದೊಡ್ಡ ಪ್ರಸ್ತುತತೆ ಸಮಾನತೆಯ ಚಿಂತನೆ. ಜಾತಿ, ಧರ್ಮ, ಲಿಂಗ ಇವೆಲ್ಲಕ್ಕಿಂತ ಮಾನವತ್ವ ದೊಡ್ಡದು ಎಂದು ಶರಣರು ಸಾರಿದರು. ಇಂದಿಗೂ ಸಮಾಜ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆಯಾಗುತ್ತಿರುವಾಗ, ವಚನಗಳ ಸಂದೇಶ ಸಮಾಜಕ್ಕೆ ಶಾಂತಿ ಮತ್ತು ಏಕತೆಯ ಮಾರ್ಗವನ್ನು ತೋರಿಸುತ್ತದೆ.

ಅಕ್ಕಮಹಾದೇವಿಯ ವಚನಗಳು ಮಹಿಳೆಯ ಆತ್ಮಸ್ವಾತಂತ್ರ್ಯ ಮತ್ತು ವ್ಯಕ್ತಿತ್ವದ ಸಂಕೇತವಾಗಿವೆ. ಇಂದಿನ ಮಹಿಳಾ ಸಬಲೀಕರಣದ ಚರ್ಚೆಗಳ ನಡುವೆ ಅವರ ಚಿಂತನೆಗಳು ಇನ್ನಷ್ಟು ಅರ್ಥಪೂರ್ಣವಾಗುವುದನ್ನು ನೋಡಬಹುದಾಗಿದೆ..

ಇಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರೂ ಮನಸ್ಸಿನಲ್ಲಿ ದೂರವಾಗುತ್ತಿದ್ದಾರೆ. ಹಣ ಮತ್ತು ಭೌತಿಕ ಸೌಲಭ್ಯಗಳ ನಡುವೆ ಮಾನವೀಯತೆ ಕಳೆದುಹೋಗುತ್ತಿದೆ. ವಚನ ಸಾಹಿತ್ಯ ಸರಳ ಜೀವನ, ಸತ್ಯ, ಕರುಣೆ ಮತ್ತು ಆತ್ಮಪರಿಶೀಲನೆಯ ಮೌಲ್ಯಗಳನ್ನು ನೆನಪಿಸುತ್ತದೆ.

ಮಾನವನನ್ನು ಮಾನವನಾಗಿಸುವುದು ಅವನ ಜ್ಞಾನವಲ್ಲ ಬದಲಾಗಿ ಅವನ ಮೌಲ್ಯಗಳು ಎಂದು ವಚನ ಸಾಹಿತ್ಯದಿಂದ ತಿಳಿಯಬಹುದು..ಹೀಗಾಗಿ, ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾದ ನೈತಿಕ ದಾರಿದೀಪವಾಗಿದೆ. ತಂತ್ರಜ್ಞಾನ ಬೆಳೆಯುತ್ತಿರುವ ಈ ಯುಗದಲ್ಲಿ ಮಾನವೀಯತೆ ಉಳಿಯಬೇಕಾದರೆ, ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ.

– ಕೆ.ಎಂ. ಪವಿತ್ರಾ, ಮುರ್ಡೇಶ್ವರ.

ಕ.ವಿ.ವಿ-ಧಾರವಾಡ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share