ಒಂದು ಕ್ಷಣ ಊಹಿಸಿ. ಮನೆ ಕಟ್ಟಲು ಪಾಯ ಅಗೆಯುತ್ತಿದ್ದೀರಿ. ಏಕಾಏಕಿ ಗುದ್ದಲಿಗೆ ಏನೋ ಲೋಹದ ವಸ್ತು ತಗುಲುತ್ತದೆ. ಕುತೂಹಲದಿಂದ ಮತ್ತಷ್ಟು ಅಗೆದಾಗ ಮಣ್ಣಿನೊಳಗೆ ಹಳೆಯ ಕುಡಿಕೆ, ಅದರಲ್ಲಿ ಚಿನ್ನದ ನಾಣ್ಯಗಳು, ಬೆಳ್ಳಿ ಆಭರಣಗಳು ಅಥವಾ ಅಮೂಲ್ಯ ವಸ್ತುಗಳು ಸಿಕ್ಕರೆ? ಕೆಲವೇ ನಿಮಿಷಗಳಲ್ಲಿ ನಿಮ್ಮ ಜೀವನವೇ ಬದಲಾಗಬಹುದು ಎನ್ನುವ ಭಾವನೆ ಮೂಡುವುದು ಸಹಜ.
ಆದರೆ ಇದೇ ಕ್ಷಣದಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಆ ನಿಧಿ ಯಾರದ್ದು? ಅದನ್ನು ಕಂಡುಹಿಡಿದವನದಾ? ಜಮೀನಿನ ಮಾಲೀಕನದಾ? ಅಥವಾ ಸರ್ಕಾರದ್ದಾ?
ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಮನೆ ಪಾಯ ಅಗೆಯುವ ವೇಳೆ ನಿಧಿ ಪತ್ತೆಯಾದ ಸುದ್ದಿ ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯ ನಂತರ “ಸಿಕ್ಕ ನಿಧಿಯಲ್ಲಿ ಸರ್ಕಾರಕ್ಕೂ ಪಾಲು ಇರುತ್ತದೆಯೇ?” ಎಂಬ ಪ್ರಶ್ನೆ ಅನೇಕ ಜನರಲ್ಲಿ ಮೂಡಿತು. ವಾಸ್ತವವಾಗಿ, ಭಾರತದಲ್ಲಿ ಇದಕ್ಕೆ ಸಂಬಂಧಿಸಿದಂತೆ ವಿಶೇಷ ಕಾನೂನು ಈಗಾಗಲೇ ಅಸ್ತಿತ್ವದಲ್ಲಿದೆ.
ಭಾರತದಲ್ಲಿ “ನಿಧಿ” ಅಥವಾ ಭೂಮಿಯೊಳಗೆ ಹೂತುಹಾಕಿ ಇಡಲಾಗಿದ್ದ ಅಮೂಲ್ಯ ವಸ್ತುಗಳ ಕುರಿತು ಮುಖ್ಯವಾಗಿ Indian Treasure Trove Act, 1878 ಅನ್ವಯವಾಗುತ್ತದೆ (ಕೆಲ ರಾಜ್ಯಗಳಲ್ಲಿ ಬದಲಾವಣೆ, ಮಾರ್ಪಾಡಿಗೆ ಒಳಪಟ್ಟಿರಬಹುದು) ಈ ಕಾನೂನಿನ ಪ್ರಕಾರ, ಮಣ್ಣಿನೊಳಗೆ ಅಥವಾ ಭೂಮಿಗೆ ಅಂಟಿಕೊಂಡಿರುವ ಸ್ಥಳದಲ್ಲಿ ಅಡಗಿಸಿಟ್ಟಿರುವ ಯಾವುದೇ ಮೌಲ್ಯಯುತ ವಸ್ತು “Treasure” ಅಥವಾ ನಿಧಿ ಎಂದು ಪರಿಗಣಿಸಲಾಗುತ್ತದೆ.
ಕಾನೂನು ಹೇಳುವ ಮೊದಲ ನಿಯಮವೇನೆಂದರೆ, ಹೀಗೆ ಸಿಕ್ಕ ನಿಧಿಯನ್ನು ಗುಪ್ತವಾಗಿ ಇಟ್ಟುಕೊಳ್ಳುವಂತಿಲ್ಲ. ಅದರ ಮೌಲ್ಯ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿದ್ದರೆ, ಅದನ್ನು ಜಿಲ್ಲಾಧಿಕಾರಿ ಅಥವಾ ಸಂಬಂಧಿತ ಆಡಳಿತಾಧಿಕಾರಿಗಳಿಗೆ ತಕ್ಷಣವೇ ತಿಳಿಸಬೇಕು. ನಿಧಿಯನ್ನು ಸರ್ಕಾರದ ಖಜಾನೆಗೆ ಒಪ್ಪಿಸುವುದು ಅಥವಾ ಅಧಿಕಾರಿಗಳ ಮುಂದೆ ಹಾಜರುಪಡಿಸುವುದು ಕಡ್ಡಾಯ. ಮಾಹಿತಿ ಮರೆಮಾಚಿದರೆ ಅಥವಾ ಕಾನೂನುಬಾಹಿರವಾಗಿ ಮಾರಾಟ ಮಾಡಲು ಯತ್ನಿಸಿದರೆ ಶಿಕ್ಷೆಯೂ ಎದುರಾಗಬಹುದು.
ಹಾಗಾದರೆ ಸಿಕ್ಕ ನಿಧಿ ಸಂಪೂರ್ಣ ಸರ್ಕಾರದ್ದೇ ಆಗಿಬಿಡುತ್ತದೆಯೇ? ಉತ್ತರ ಅಷ್ಟು ಸರಳವಲ್ಲ. ನಿಧಿ ಸಿಕ್ಕ ಜಮೀನು ಖಾಸಗಿ ವ್ಯಕ್ತಿಯದ್ದಾಗಿದ್ದರೆ, ಜಮೀನಿನ ಮಾಲೀಕನಿಗೂ ಹಕ್ಕು ಇರುತ್ತದೆ. ಕೆಲ ಸಂದರ್ಭಗಳಲ್ಲಿ ನಿಧಿಯನ್ನು ಕಂಡುಹಿಡಿದ ವ್ಯಕ್ತಿ ಮತ್ತು ಜಮೀನಿನ ಮಾಲೀಕರ ನಡುವೆ ಪಾಲು ಹಂಚಿಕೆ ಮಾಡುವ ಅವಕಾಶ ಕಾನೂನಿನಲ್ಲಿ ಇದೆ. ಆದರೆ ಅಂತಿಮ ನಿರ್ಧಾರವನ್ನು ಸಂಬಂಧಿತ ಅಧಿಕಾರಿಗಳು ತನಿಖೆಯ ನಂತರ ತೆಗೆದುಕೊಳ್ಳುತ್ತಾರೆ.
ಆದರೆ ಒಂದು ಮಹತ್ವದ ಅಂಶ ಇಲ್ಲಿದೆ. ನಿಧಿಯಾಗಿ ಸಿಕ್ಕ ವಸ್ತುಗಳು ಐತಿಹಾಸಿಕ, ಪುರಾತತ್ವ ಅಥವಾ ಸಾಂಸ್ಕೃತಿಕ ಮಹತ್ವ ಹೊಂದಿವೆ ಎಂದು ಸರ್ಕಾರ ನಿರ್ಧರಿಸಿದರೆ, ಅವುಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬಹುದು. ವಿಶೇಷವಾಗಿ ಹಳೆಯ ನಾಣ್ಯಗಳು, ರಾಜವಂಶಗಳ ಕಾಲದ ಚಿನ್ನ-ಬೆಳ್ಳಿ ವಸ್ತುಗಳು, ಪುರಾತನ ಶಿಲ್ಪಗಳು ಅಥವಾ ಅಪರೂಪದ ಐತಿಹಾಸಿಕ ವಸ್ತುಗಳ ವಿಷಯದಲ್ಲಿ ಸರ್ಕಾರದ ಹಕ್ಕು ಹೆಚ್ಚು ಬಲವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಸ್ತುಗಳ ಮೌಲ್ಯಮಾಪನದ ಆಧಾರದ ಮೇಲೆ ಪರಿಹಾರ ನೀಡುವ ಪ್ರಶ್ನೆ ಬರಬಹುದು, ಆದರೆ ವಸ್ತುಗಳನ್ನು ಖಾಸಗಿ ಸ್ವತ್ತಾಗಿ ಉಳಿಸಿಕೊಳ್ಳುವುದು ಸುಲಭವಲ್ಲ.
ಇನ್ನೊಂದು ವಿಷಯ ಗಮನಿಸಬೇಕಾದದ್ದು, ಜನಪ್ರಿಯ ಸಿನಿಮಾಗಳಲ್ಲಿ ತೋರಿಸುವಂತೆ “ನಿಧಿ ಸಿಕ್ಕಿತು ಎಂದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿ” ಆಗುವ ಕಲ್ಪನೆ ವಾಸ್ತವದಲ್ಲಿ ಅನ್ವಯಿಸುವುದಿಲ್ಲ. ಕಾನೂನು ಪ್ರಕ್ರಿಯೆ, ಮಾಲೀಕತ್ವದ ಪರಿಶೀಲನೆ, ಐತಿಹಾಸಿಕ ಮಹತ್ವದ ಮೌಲ್ಯಮಾಪನ, ಪುರಾತತ್ವ ಇಲಾಖೆಯ ಅಭಿಪ್ರಾಯ ಇವೆಲ್ಲವೂ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಅದರಲ್ಲೂ ಪುರಾತತ್ವ ಮಹತ್ವ ಹೊಂದಿರುವ ವಸ್ತುಗಳನ್ನು ಮರೆಮಾಚುವುದು ಅಥವಾ ಕಳ್ಳಸಾಗಣೆ ಮಾಡಲು ಯತ್ನಿಸುವುದು ಗಂಭೀರ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಪುರಾತನ ವಸ್ತುಗಳ ರಕ್ಷಣೆಗೆ ಪ್ರತ್ಯೇಕ ಕಾನೂನುಗಳೂ ಜಾರಿಯಲ್ಲಿವೆ.
ಒಟ್ಟಿನಲ್ಲಿ, ನಿಮ್ಮ ಜಮೀನಿನಲ್ಲಿ ನಿಧಿ ಸಿಕ್ಕಿತು ಎಂದ ಮಾತ್ರಕ್ಕೆ ಅದು ಸಂಪೂರ್ಣ ನಿಮ್ಮದೇ ಆಗುವುದಿಲ್ಲ. ಅದೇ ವೇಳೆ ಸರ್ಕಾರ ಎಲ್ಲವನ್ನೂ ಕಸಿದುಕೊಳ್ಳುತ್ತದೆ ಎನ್ನುವುದೂ ಸರಿಯಲ್ಲ. ನಿಧಿಯ ಸ್ವರೂಪ, ಅದರ ಐತಿಹಾಸಿಕ ಮಹತ್ವ, ಜಮೀನಿನ ಮಾಲೀಕತ್ವ ಹಾಗೂ ಕಾನೂನು ಪ್ರಕ್ರಿಯೆಯ ಆಧಾರದ ಮೇಲೆ ಅಂತಿಮ ಹಕ್ಕು ನಿರ್ಧಾರವಾಗುತ್ತದೆ.
ಹೀಗಾಗಿ, ನಾಳೆ ನಿಮ್ಮ ಮನೆಯ ಪಾಯ ಅಗೆಯುವಾಗ ಮಣ್ಣಿನೊಳಗಿಂದ ಚಿನ್ನದ ಕುಡಿಕೆ ಹೊರಬಂದರೆ ಮೊದಲ ಕೆಲಸ ಅದನ್ನು ಅಡಗಿಸುವುದಲ್ಲ. ಕಾನೂನಿಗೆ ಮಾಹಿತಿ ನೀಡುವುದೇ ಆಗಬೇಕು!