Monday, September 7, 2026
Join WhatsApp Group
HomeLocal Newsಸಬ್‌ಮರೀನ್ ಬೇಟೆಗೆ ಸಜ್ಜಾದ ಸ್ವದೇಶಿ ಯುದ್ಧನೌಕೆ

ಸಬ್‌ಮರೀನ್ ಬೇಟೆಗೆ ಸಜ್ಜಾದ ಸ್ವದೇಶಿ ಯುದ್ಧನೌಕೆ

ಕಾರವಾರದಲ್ಲಿ ಐಎನ್‌ಎಸ್ ಮಾಲ್ವನ್ ಸೇರ್ಪಡೆ; ನೌಕಾಪಡೆಗೆ ಮತ್ತಷ್ಟು ಬಲ

ಕಾರವಾರ: ಭಾರತೀಯ ನೌಕಾಪಡೆಯ ಬಲವರ್ಧನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಅತ್ಯಾಧುನಿಕ ಆಂಟಿ-ಸಬ್‌ಮರೀನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಶ್ರೇಣಿಯ ಐಎನ್‌ಎಸ್ ಮಾಲ್ವನ್ ಯುದ್ಧನೌಕೆಯನ್ನು ಬುಧವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ತಂತ್ರಜ್ಞಾನವು ಸಾಮರ್ಥ್ಯವನ್ನು ನೀಡಬಹುದು. ಆದರೆ ಯುದ್ಧನೌಕೆಯನ್ನು ಅತ್ಯಂತ ಶಕ್ತಿಶಾಲಿ ಯುದ್ಧಪಡೆಯಾಗಿ ರೂಪಿಸುವುದು ನಾವಿಕರ ವೃತ್ತಿಪರತೆ, ನಾಯಕತ್ವ ಮತ್ತು ತಂಡದ ಶ್ರಮ. ಐಎನ್‌ಎಸ್ ಮಾಲ್ವನ್ ಶಾಂತಿಯ ಸಮಯದಲ್ಲಿ ಸದಾ ಜಾಗರೂಕವಾಗಿರಲಿ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ದೃಢವಾಗಿ ನಿಲ್ಲಲಿ ಹಾಗೂ ಸಂಘರ್ಷದ ವೇಳೆಯಲ್ಲಿ ವಿಜಯಶಾಲಿಯಾಗಲಿ ಎಂದು ಅವರು ಹಾರೈಸಿದರು.

ಕಾರವಾರದ ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಕದಂಬ ನೌಕಾನೆಲೆಯು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯಾಚರಣಾ ಸೌಲಭ್ಯಗಳನ್ನು ಹೊಂದಿದ್ದು, ಭಾರತದ ಕರಾವಳಿ ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಮಾಂಡರ್ ಪ್ರವೀಣ್ ಕುಮಾರ್ ತಿವಾರಿ ಅವರು ಐಎನ್‌ಎಸ್ ಮಾಲ್ವನ್‌ನ ಮೊದಲ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ನೌಕಾಪಡೆಯ ಪಶ್ಚಿಮ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಯುದ್ಧನೌಕೆಗಳ ಉತ್ಪಾದನೆ ವಿಭಾಗದ ವೈಸ್ ಅಡ್ಮಿರಲ್ ಸಂಜಯ್ ಸಾಧು, ಕರ್ನಾಟಕ ನೇವಲ್ ಏರಿಯಾದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೋಶ್ ವಿಜೆ ಸೇರಿದಂತೆ ಹಿರಿಯ ರಕ್ಷಣಾ ಮತ್ತು ನೌಕಾಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲ ಯುದ್ಧನೌಕೆಯ ಹೆಗ್ಗಳಿಕೆ

ಕಾರವಾರದ ಪ್ರಾಜೆಕ್ಟ್ ಸೀಬರ್ಡ್ ನೌಕಾನೆಲೆಯಲ್ಲಿ ಅಧಿಕೃತವಾಗಿ ನಿಯೋಜನೆಗೊಂಡ ಮೊದಲ ಯುದ್ಧನೌಕೆ ಎಂಬ ಹೆಗ್ಗಳಿಕೆಗೆ ಐಎನ್‌ಎಸ್ ಮಾಲ್ವನ್ ಪಾತ್ರವಾಗಿದೆ. ಭಾರತದ ಸ್ವದೇಶಿ ಹಡಗು ನಿರ್ಮಾಣ ಯೋಜನೆಯಡಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಯುದ್ಧನೌಕೆಯನ್ನು ಕರಾವಳಿ ಹಾಗೂ ಆಳಸಮುದ್ರದಲ್ಲಿ ಶತ್ರು ಜಲಾಂತರ್ಗಾಮಿಗಳನ್ನು (ಸಬ್‌ಮರೀನ್) ಪತ್ತೆಹಚ್ಚಲು, ಹಿಂಬಾಲಿಸಲು ಮತ್ತು ನಾಶಪಡಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್ ತೂಕ ಹೊಂದಿರುವ ಈ ಯುದ್ಧನೌಕೆ ಅತ್ಯಾಧುನಿಕ ಆಂಟಿ-ಸಬ್‌ಮರೀನ್ ರಾಕೆಟ್‌ಗಳು, ಸುಧಾರಿತ ಸೋನಾರ್ ವ್ಯವಸ್ಥೆ ಹಾಗೂ ಆಧುನಿಕ ರೇಡಾರ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಜಲಾಂತರ್ಗಾಮಿ ನಿಗಾ ಮತ್ತು ಜಲದಾಳಿ ವಿರೋಧಿ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಶಿವಾಜಿ ಪರಂಪರೆಯ ಪ್ರತೀಕ

ಮಹಾರಾಷ್ಟ್ರದ ಕರಾವಳಿ ಪಟ್ಟಣ ಮಾಲ್ವನ್ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಪಶ್ಚಿಮ ಕರಾವಳಿಯ ರಕ್ಷಣೆಗೆ ನಿರ್ಮಿಸಿದ್ದ ಐತಿಹಾಸಿಕ ಸಿಂಧುದುರ್ಗ ಕೋಟೆಯಿರುವ ಪ್ರದೇಶವೇ ಮಾಲ್ವನ್. ಈ ಐತಿಹಾಸಿಕ ಪರಂಪರೆಯ ಸಂಕೇತವಾಗಿ, ಯುದ್ಧನೌಕೆಯ ಲಾಂಛನದಲ್ಲಿ ಶಿವಾಜಿ ಮಹಾರಾಜರ ಪ್ರಸಿದ್ಧ ‘ಬಾಘ್ ನಖ್’ (ಹುಲಿ ಉಗುರು) ಆಯುಧವನ್ನು ಅಳವಡಿಸಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share