Monday, September 7, 2026
Join WhatsApp Group
HomeLocal News67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್; ಸಂಸದ ಕಾಗೇರಿ ಶ್ರಮಕ್ಕೆ ಫಲ

67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್; ಸಂಸದ ಕಾಗೇರಿ ಶ್ರಮಕ್ಕೆ ಫಲ

ಶಿರಸಿ: ಖಾಸಗಿ ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ BSNL ಸಿಮ್ ಸಿಗದೆ ಅಂಚೆ ಹಾಗೂ ಹಣಕಾಸು ಸೇವೆಗಳಿಂದ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆಗೆ ಇದೀಗ ಪರಿಹಾರ ದೊರೆತಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್‌ಗಳನ್ನು ಒದಗಿಸಿ ಸಕ್ರಿಯಗೊಳಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಗ್ರಾಮೀಣ ಅಂಚೆ ಕಚೇರಿಗಳಲ್ಲಿ BSNL ಸಿಮ್ ಕಾರ್ಡ್‌ಗಳ ಅಲಭ್ಯತೆಯಿಂದಾಗಿ ಸಾರ್ವಜನಿಕರು, ಅದರಲ್ಲೂ ಪಿಂಚಣಿ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಹಣಕಾಸು ಸೇವೆ ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಸಾರ್ವಜನಿಕರು ಸಂಸದರ ಗಮನಕ್ಕೆ ತಂದಿದ್ದರು.

ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ 43, ಶಿವಮೊಗ್ಗದ 22 ಹಾಗೂ ಚಿಕ್ಕಮಗಳೂರಿನ 2 ಗ್ರಾಮೀಣ ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ BSNL ಹೊರತುಪಡಿಸಿ ಬೇರೆ ಖಾಸಗಿ ನೆಟ್‌ವರ್ಕ್ ಲಭ್ಯವಿರಲಿಲ್ಲ. ಹೀಗಾಗಿ ಸಿಮ್ ಲಭ್ಯವಿಲ್ಲದ ಕಾರಣ ಗ್ರಾಮೀಣ ಭಾಗದ ವೃದ್ಧರು, ರೈತರು, ವಿಧವೆಯರು ಹಾಗೂ ವಿಕಲಚೇತನರು ಪಿಂಚಣಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಪರದಾಡುವಂತಾಗಿತ್ತು.

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ BSNL ಸಿಮ್‌ಗಳನ್ನು ತಕ್ಷಣ ಒದಗಿಸುವಂತೆ ಮನವಿ ಮಾಡಿದ್ದರು.

ಇದೀಗ ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಹಾಗೂ IPPB, BSNL ನೆಟ್‌ವರ್ಕ್ ಹೊಂದಿರುವ ರಾಜ್ಯದ ಎಲ್ಲಾ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಸಿಮ್ ಒದಗಿಸಿ ಸಕ್ರಿಯಗೊಳಿಸಿದೆ. ಇದರಿಂದ ಸ್ಥಗಿತಗೊಂಡಿದ್ದ ಅಂಚೆ ಹಾಗೂ ಹಣಕಾಸು ಸೇವೆಗಳು ಪುನರಾರಂಭಗೊಂಡಿದ್ದು, ಗ್ರಾಮೀಣ ಜನರ ಬಹುದಿನಗಳ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share