ಕಾರವಾರ: ನ್ಯಾಯಾಲಯದ ತಡೆ ಆದೇಶ ಜಾರಿಯಲ್ಲಿದ್ದರೂ ವಿವಾದಿತ ಮನೆಗೆ ಪ್ರವೇಶಿಸಿ ವಾಸ್ತವ್ಯ ಆರಂಭಿಸಿದ್ದಲ್ಲದೆ, ಪ್ರಶ್ನಿಸಲು ಬಂದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡವಾಡ ನಿವಾಸಿ ಸದಾನಂದ ವಿಶ್ವನಾಥ ಮಾಂಜ್ರೇಕರ (58) ನೀಡಿದ ದೂರಿನ ಮೇರೆಗೆ ಸದಾಶಿವಗಡದ ರಾಜೇಖಾನ್ ಭಾಗದ ವೆಂಕಟರಾಯ್ ವಿಠೋಬಾ ಸಾಳಸ್ಕರ (61) ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರವಾರ ತಾಲೂಕಿನ ರಾಜೇಖಾನ್ ಭಾಗದ ಸರ್ವೆ ನಂ.1036ರಲ್ಲಿರುವ 21 ಗುಂಟೆ ಜಮೀನು ಹಾಗೂ ಅದರಲ್ಲಿರುವ ಮನೆ ತಮ್ಮ ಮೃತ ಅಜ್ಜಿ ಸುಭದ್ರಾ ವಿಠಲ ಕಾಂಬ್ಳೆ ಅವರ ಆಸ್ತಿಯಾಗಿದೆ. ಮೃತ ಅಜ್ಜಿಯ ಹೆಸರಿನಲ್ಲಿದ್ದ ಮನೆಯನ್ನು ಸುಮಾರು 12 ವರ್ಷಗಳ ಹಿಂದೆ ದುರಸ್ತಿ ಮಾಡಿ ಮೂರು ಭಾಗಗಳಾಗಿ ವಿಭಜಿಸಿ ಬಾಡಿಗೆಗೆ ನೀಡಲಾಗಿತ್ತು.
ಈ ಆಸ್ತಿಯ ಹಕ್ಕು ಸಂಬಂಧವಾಗಿ ಆರೋಪಿ 2021ರಲ್ಲಿ ಕಾರವಾರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, 2026ರ ಏಪ್ರಿಲ್ 10ರಂದು ಅವರ ಪರವಾಗಿ ತೀರ್ಪು ಬಂದಿತ್ತು. ಆದರೆ ಆ ತೀರ್ಪನ್ನು ಪ್ರಶ್ನಿಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಮೂಲ ತೀರ್ಪಿನ ಜಾರಿಗೆ ತಡೆ ಆದೇಶವೂ ದೊರೆತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರ ನಡುವೆಯೇ ಜುಲೈ 19ರಂದು ಬೆಳಿಗ್ಗೆ ಆರೋಪಿ ವಿವಾದಿತ ಮನೆಯ ಖಾಲಿ ಭಾಗಕ್ಕೆ ತನ್ನ ಸಾಮಾಗ್ರಿಗಳನ್ನು ತಂದು ಕುಟುಂಬದವರೊಂದಿಗೆ ವಾಸ್ತವ್ಯ ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸಂಜೆ ವೇಳೆ ತಡೆ ಆದೇಶದ ಬಗ್ಗೆ ತಿಳಿಸಲು ಹೋದಾಗ, ʻಈ ಮನೆ ನನ್ನದು. ಕೋರ್ಟ್ ತೀರ್ಪು ನನ್ನ ಪರವಾಗಿದೆ. ಮತ್ತೆ ಇಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲʼ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.