ಶಿರಸಿ: ʻಒಂದು ರೂಪಾಯಿ ಹಾಕಿ 80 ರೂಪಾಯಿ ಗೆಲ್ಲಿʼ ಎಂದು ಸಾರ್ವಜನಿಕರನ್ನು ಕೂಗಿ ಕರೆದು ಓಸಿ (ಮಟ್ಕಾ) ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಪಾನ್‌ಶಾಪ್ ವ್ಯಾಪಾರಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆಗಡೆಕಟ್ಟಾ ನಿವಾಸಿ ವಿನಾಯಕ ಈರಪ್ಪ ನಾಯ್ಕ (61) ಗುರುತಿಸಲಾಗಿದೆ.
ಆಗಸ್ಟ್ 4ರಂದು ಸಂಜೆ 6.35ರ ಸುಮಾರಿಗೆ ಶಿರಸಿ–ಯಾಣ ರಸ್ತೆಯ ಮಕ್ಕಳತಾಯಿಮನೆ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರನ್ನು ಕೂಗಿ ಕರೆದು, ಓಸಿ ಅಂಕೆ ಸಂಖ್ಯೆಗಳ ಮೇಲೆ ಹಣ ಕಟ್ಟಿದರೆ ₹1ಕ್ಕೆ ₹80 ನೀಡುವುದಾಗಿ ಆಮಿಷ ಒಡ್ಡಿ ಹಣ ಪಡೆದು ಚೀಟಿ ಬರೆದುಕೊಡುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ (ತನಿಖೆ) ಅಶೋಕ ಆರ್. ರಾಠೋಡ ನೇತೃತ್ವದ ತಂಡ ದಾಳಿ ನಡೆಸಿತು.
ದಾಳಿಯ ವೇಳೆ ಆರೋಪಿಯಿಂದ 650 ರೂ ನಗದು, ಒಂದು ಬಾಲ್‌ಪೆನ್, ಓಸಿ ಅಂಕೆ ಬರೆದ ಚೀಟಿ ಹಾಗೂ ಚೀಟಿ ಬರೆಯಲು ಕತ್ತರಿಸಿ ಇಟ್ಟಿದ್ದ ನಾಲ್ಕು ಸಣ್ಣ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.