ಕಾರವಾರ: ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಮಾರಾಟಕ್ಕಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಕಾರವಾರ ಗ್ರಾಮೀಣ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೀಬರ್ಡ್ ಕಾಲೋನಿ, ತೋಡೂರಿನ ದರ್ಶನ ಹೇಮಾನಂದ ನಾಯ್ಕ (28) ಆರೋಪಿತ.
ಆ.20ರಂದು ರಾತ್ರಿ 9 ಗಂಟೆ ಸುಮಾರಿಗೆ ದಾಳಿ ನಡೆಸಿದಾಗ, ಆರೋಪಿತನ ಬಳಿ 750 ಎಂಎಲ್‌ನ 10 ಗಾಜಿನ ಬಾಟಲಿಗಳು ಹಾಗೂ ಮತ್ತೊಂದು ಬ್ರ್ಯಾಂಡ್‌ನ 750 ಎಂಎಲ್‌ನ 4 ಬಾಟಲಿಗಳು ಸೇರಿದಂತೆ ಒಟ್ಟು 14 ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ ₹23,140 ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದ್ಯವನ್ನು ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.