ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನ ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 22ರಂದು ಸಂಜೆ ಸುಮಾರು 7.30ರ ವೇಳೆಗೆ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ವಾಂಗಡ ಸಮೀಪದ ನರ್ಸರಿ ಬಳಿ ಈ ಅಪಘಾತ ಸಂಭವಿಸಿತ್ತು. ಬೈತಕೋಲ್‌ನ ಮಠ ರಸ್ತೆಯ ನಿವಾಸಿ ಕ್ರಿಸ್ಟೋಫರ್ ವಿಲ್ಸನ್ ಫರ್ನಾಂಡೀಸ್ ಅವರು ಕೆಎ-30-ವೈ-0512 ಸಂಖ್ಯೆಯ ಹೀರೋ ಫ್ಯಾಶನ್ ಬೈಕ್‌ನಲ್ಲಿ ಚೆಂಡಿಯಾ ನಿವಾಸಿ ಮಾರುತಿ ರಾಮದಾಸ್ ನಾಯ್ಕ (42) ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮಾಜಾಳಿ ಕಡೆಯಿಂದ ಕಾರವಾರದತ್ತ ತೆರಳುತ್ತಿದ್ದರು.
ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಕೆಎ-30-ಎ-4585 ಸಂಖ್ಯೆಯ ಮಹೀಂದ್ರಾ ಟ್ರಿಯೋ ಎಲೆಕ್ಟ್ರಿಕ್ ಪ್ರಯಾಣಿಕರ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಟೋವನ್ನು ಶಿರವಾಡದ ಬಂಗಾರಪ್ಪ ನಗರ ನಿವಾಸಿ ಶಂಕರ ಜೈರಾಮ ಕಿಂದಳಕರ ಚಾಲನೆ ಮಾಡುತ್ತಿದ್ದರು.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಹಾಗೂ ಸಹಸವಾರ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸವಾರ ಕ್ರಿಸ್ಟೋಫರ್ ಅವರಿಗೆ ಕೈಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಹಸವಾರ ಮಾರುತಿ ನಾಯ್ಕ ಅವರ ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿರಲಿಲ್ಲ. ಬಳಿಕ ಗಾಯಾಳುವಿನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಘಟನೆ ಕುರಿತು ಮಾಹಿತಿ ತಿಳಿದು, ಆಟೋ ಚಾಲಕ ಶಂಕರ ಕಿಂದಳಕರ ಅವರು ಜುಲೈ 27ರಂದು ಚಿತ್ತಾಕುಲಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಲು ವಿಳಂಬವಾದ ಕಾರಣವನ್ನೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.