ಕಾರವಾರ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನ, ಮಾತನಾಡುವ ಕೌಶಲ್ಯಗಳೊಂದಿಗೆ ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳಬೇಕು ಎಂದು ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲೆ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ–2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜಗತ್ತು ತೀವ್ರ ಸ್ಪರ್ಧಾತ್ಮಕವಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಸಂದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ, ಜಾಣ್ಮೆಯಿಂದ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಹತ್ತನೇ ತರಗತಿಯ ನಂತರದ ಆರು ವರ್ಷಗಳ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿದರೆ, ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಯುವಜನತೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಶಿಕ್ಷಣವು ಜೀವನದ ಅಡಿಪಾಯ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಅಂಕಗಳ ಜೊತೆಗೆ ಧೈರ್ಯ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನವೂ ಅಗತ್ಯ. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ,ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು. ತಾವು ಕಲಿತ ಶಾಲೆಗಳಿಗೆ ಭೇಟಿ ನೀಡಿ, ಮುಂದಿನ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸಂಘದಿಂದ ಪ್ರತಿವರ್ಷ ಸುಮಾರು 10 ಸಾವಿರ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ಅರ್ಜಿ ಸಲ್ಲಿಕೆ, ಪರಿಶೀಲನೆ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪಾರದರ್ಶಕವಾಗಿ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಸಂಬಂಧಿಸಿದಂತೆಯೂ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ. ಕೇಂದ್ರದಲ್ಲಿ 8ನೇ ವೇತನ ಆಯೋಗ ಜಾರಿಯಾದ ಬಳಿಕ ರಾಜ್ಯದಲ್ಲಿಯೂ ಅದನ್ನು ಅಳವಡಿಸುವಂತೆ ಶಿಫಾರಸು ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಮತ್ತು ಶೇ 100ರಷ್ಟು ಫಲಿತಾಂಶ ದಾಖಲಿಸಿದ ಶಾಲೆ ಹಾಗೂ ಕಾಲೇಜುಗಳ ಮುಖ್ಯಸ್ಥರನ್ನೂ ಗೌರವಿಸಲಾಯಿತು.
ಶಿರಸಿ ಶೈಕ್ಷಣಿಕ ಜಿಲ್ಲೆಯ ವಿಭಾಗೀಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನಾಯ್ಕ, ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಂಜೀವಕುಮಾರ ಎಸ್.ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ವನಿತಾ ಶೇಟ್ ಹಾಗೂ ವಿಕಾಸ ಕಾರ್ಯಕ್ರಮ ನಿರೂಪಿಸಿದರು.