ಯಲ್ಲಾಪುರ: ಮತದಾರರ ಪಟ್ಟಿಯು ನಿಖರ ಹಾಗೂ ದೋಷರಹಿತವಾಗಿರುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಅಗತ್ಯವಾಗಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಸ್.ಐ.ಆರ್. ಕಾರ್ಯವನ್ನು ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕೈಗೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಅಧಿಕಾರಿಗಳು ಮತ್ತು ಬಿ.ಎಲ್.ಎ-2 ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅವರು ಶುಕ್ರವಾರ ತಾಲೂಕಿನ ಕುಂದರಗಿ, ಹಿತ್ಲಳ್ಳಿ, ಉಮ್ಮಚಗಿ, ಹಾಸಣಗಿ ಹಾಗೂ ಕಂಪ್ಲಿ ಗ್ರಾಮಗಳಲ್ಲಿ ಎಸ್.ಐ.ಆರ್. ಸಭೆಗಳನ್ನು ನಡೆಸಿದರು.
ಸಭೆಗಳಲ್ಲಿ ಬೂತ್‌ವಾರು ಮಾಹಿತಿಯನ್ನು ಬಿ.ಎಲ್.ಎ-2 ಪ್ರತಿನಿಧಿಗಳಿಂದ ಪಡೆದು ಪರಿಶೀಲಿಸಿದ ಶಾಸಕರು, ಮತದಾರರ ಪಟ್ಟಿಯ ಪರಿಷ್ಕರಣೆ, ಹೊಸ ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಗತ್ಯ ದಾಖಲೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.
ಸಭೆಗಳಲ್ಲಿ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಬಿ.ಎಲ್.ಎ-2 ಪ್ರತಿನಿಧಿಗಳು ಉಪಸ್ಥಿತರಿದ್ದರು.