ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ, ನಗದು ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಓಣಿಕೇರಿ ನಿವಾಸಿ ಸುಂಕಪ್ಪ ದೇವೇಂದ್ರಪ್ಪ ಕೊರವರ (46) ಎಂದು ಗುರುತಿಸಲಾಗಿದೆ.
ಜೂನ್ 25ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಓಣಿಕೇರಿ ಗ್ರಾಮದಿಂದ ಕೊಪ್ಪರಸಿಕೊಪ್ಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆರೆಯ ಸಮೀಪ ಆರೋಪಿಯು ಸಾರ್ವಜನಿಕರನ್ನು ಕೂಗಿ ಕರೆದು ಲಾಭದ ಆಮಿಷವೊಡ್ಡಿ ಜೂಜಾಟ ನಡೆಸುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಗೌಡರ ನೇತೃತ್ವದಲ್ಲಿ ಪೊಲೀಸರು ಪಂಚರ ಸಮಕ್ಷಮ ದಾಳಿ ನಡೆಸಿದರು. ಈ ವೇಳೆ ಆರೋಪಿಯನ್ನು ಬಂಧಿಸಿ, ₹710 ನಗದು, ಒಂದು ಬಾಲ್ ಪೆನ್, ಓಸಿ ಅಂಕೆ ಬರೆದ ಚೀಟಿ ಮುಂತಾದವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.