ತೆರಿಗೆ ನಷ್ಟವಾದರೂ ಸರಿ, ಜನರ ಆರೋಗ್ಯವೇ ನಮಗೆ ಮುಖ್ಯ
ಬೆಂಗಳೂರು: ಪಾನ್ ಮಸಾಲ ಹಾಗೂ ಗುಟ್ಕಾ ಉತ್ಪನ್ನಗಳಲ್ಲಿ ನಶೆ ಉಂಟುಮಾಡುವ ಅಂಶಗಳು ಸೇರಿಸಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ’ ಅಭಿಯಾನದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರದಿಗಳ ಪ್ರಕಾರ ಪಾನ್ ಮಸಾಲ ಹಾಗೂ ಗುಟ್ಕಾ ಉತ್ಪನ್ನಗಳಲ್ಲಿ ವ್ಯಸನಕಾರಿ ಅಂಶಗಳು ಪತ್ತೆಯಾಗಿರುವ ಮಾಹಿತಿ ಸರ್ಕಾರಕ್ಕೆ ಬಂದಿದೆ ಎಂದು ಹೇಳಿದರು.
ಇಂತಹ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳ ಮಾಲೀಕರಿಗೆ ನಾನು ಈಗಲೇ ಎಚ್ಚರಿಕೆ ನೀಡುತ್ತಿದ್ದೇನೆ. ಈ ಉತ್ಪನ್ನಗಳನ್ನು ನಿಷೇಧಿಸಿದರೆ ಸರ್ಕಾರಕ್ಕೆ ₹100 ಕೋಟಿ ತೆರಿಗೆ ನಷ್ಟವಾದರೂ ಪರವಾಗಿಲ್ಲ. ಜನರ ಆರೋಗ್ಯವೇ ನಮಗೆ ಮುಖ್ಯ. ಮುಂದಿನ ದಿನಗಳಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮಾದಕದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಯುವಜನರನ್ನು ವ್ಯಸನದಿಂದ ದೂರವಿಡಲು ಸಮಾಜದ ಎಲ್ಲ ವರ್ಗಗಳು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ನಶೆ ಮುಕ್ತ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿರುವ ನೀವೆಲ್ಲರೂ ಈ ಜಾಗೃತಿ ಅಭಿಯಾನದ ರಾಯಭಾರಿಗಳು. ಮಾದಕ ವ್ಯಸನ ತಡೆ ದೊಡ್ಡ ಸವಾಲಾಗಿದ್ದು, ವೈದ್ಯಕೀಯ ವೃತ್ತಿಯಲ್ಲಿರುವವರು ಯುವಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.