ಮುರ್ಡೇಶ್ವರದಲ್ಲಿ ಯುವಕನ ವಿರುದ್ಧ ಪ್ರಕರಣ
ಭಟ್ಕಳ: ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾವಳ್ಳಿ-2 ನಿವಾಸಿ ಹಾಗೂ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಗಣೇಶ ಜಯಂತ ನಾಯ್ಕ (24) ನೀಡಿದ ದೂರಿನ ಮೇರೆಗೆ, ಹೃತೀಕ ಮಂಜುನಾಥ ನಾಯ್ಕ (26) ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜುಲೈ 3ರಂದು ಮಧ್ಯಾಹ್ನ ಸುಮಾರು 2.20ರ ವೇಳೆಗೆ ಗಣೇಶ ಅವರು ತಮ್ಮ ಕೆಎ-47/ಎನ್-3579 ಸಂಖ್ಯೆಯ ಕಾರಿನಲ್ಲಿ ಬ್ಯಾಂಕ್‌ಗೆ ತೆರಳುತ್ತಿದ್ದಾಗ, ಬಸ್ತಿ ರಸ್ತೆಯ ಪಿ.ಎನ್.ಇ. ಶೋ ರೂಂ ಸಮೀಪ ಆರೋಪಿತ ಹೃತೀಕ, ತನ್ನ ಕೆಎ-47/ಎಂ-5725 ಸಂಖ್ಯೆಯ ಕಾರನ್ನು ಅತಿವೇಗದಲ್ಲಿ ಗಣೇಶ ಅವರ ಕಾರಿನತ್ತ ಚಲಾಯಿಸಿ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ.
ಗಣೇಶ ಅವರು ಕಾರಿನ ವೇಗ ಹೆಚ್ಚಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಆರೋಪಿತನ ಕಾರು ಅವರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ನಿಯಂತ್ರಣ ತಪ್ಪಿದ ಆರೋಪಿತನ ಕಾರು ಸ್ಥಳೀಯ ನಿವಾಸಿ ಮಾರ್ಟಿನ್ ಪ್ರಾನ್ಸಿಸ್ ಲೂಯಿಸ್ ಅವರ ಮನೆಯ ಕಾಂಪೌಂಡ್ ಗೋಡೆಗೆ ಗುದ್ದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.