ಭಟ್ಕಳ: ಮುರ್ಡೇಶ್ವರ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ “ಮುರ್ಡೇಶ್ವರ ಅದೃಷ್ಟ ಡ್ರಾ” ಎಂಬ ಹೆಸರಿನಲ್ಲಿ ನಕಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚನೆ ನಡೆಸುತ್ತಿದ್ದ ಆರೋಪಿಯನ್ನು ಮುರ್ಡೇಶ್ವರ ಪೊಲೀಸರು ಒಂದು ವರ್ಷದ ನಿರಂತರ ಕಾರ್ಯಾಚರಣೆಯ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಶ್ರೀ ಮುರ್ಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಮದನ ಶೆಟ್ಟಿ ಅವರು 2025ರ ಆಗಸ್ಟ್ 6ರಂದು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಪರಿಚಿತ ವ್ಯಕ್ತಿಯೊಬ್ಬ ದೇವಸ್ಥಾನದ ಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪುಟಗಳನ್ನು ಸೃಷ್ಟಿಸಿ, “ಮುರ್ಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ಪಾಂಪ್ಲೆಟ್‌ಗಳು ಹಾಗೂ ನಕಲಿ ಲಾಟರಿ ಟಿಕೆಟ್‌ಗಳನ್ನು ಹರಿಬಿಟ್ಟು ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡವನ್ನು ರಚಿಸಿತು. ಕಳೆದ ಒಂದು ವರ್ಷದಿಂದ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಆರೋಪಿಯ ಸುಳಿವಿಗಾಗಿ ನಿರಂತರ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ತನಿಖೆ ನಡೆಸಲಾಯಿತು.
ಅಂತಿಮವಾಗಿ, ಜುಲೈ 16ರಂದು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಸಾಲಖನಗಾಂವ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂಬಾತನನ್ನು ಬಂಧಿಸಲಾಯಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಎನ್.ಎಂ. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ ಹಾಗೂ ಮುರ್ಡೇಶ್ವರ ವೃತ್ತದ ಪೊಲೀಸ್ ನಿರೀಕ್ಷಕ ಜಗದೀಶ ಹಂಚಿನಾಳ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಪಿಎಸ್‌ಐ ಹನುಮಂತ ಬಿರಾದಾರ ಮತ್ತು ಪಿಎಸ್‌ಐ ಲೋಕನಾಥ ರಾಥೋಡ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥ ಲಕ್ಕಾಪುರ, ಬಿಲಾಲ್ ಅಹ್ಮದ್ ಸಿದ್ದಾಪೂರ, ವಿಜಯ ನಾಯ್ಕ ಹಾಗೂ ಸಿದ್ದಪ್ಪ ಕಾಂಬಳೆ ಅವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಯಿತು.
ಒಂದು ವರ್ಷದ ಕಾಲ ನಿರಂತರ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿ ಪ್ರಶಂಸಿಸಿದೆ.