ಕೊರಿಯರ್ ಕೇಂದ್ರಗಳಲ್ಲಿ ಶ್ವಾನದಳದಿಂದ ತಪಾಸಣೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳ ಕಳ್ಳಸಾಗಣೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ.
ಈ ನಿಟ್ಟಿನಲ್ಲಿ ಗುರುವಾರ ಯಲ್ಲಾಪುರ ಪಟ್ಟಣದ ಅಂಚೆ ಕಚೇರಿ ಹಾಗೂ ವಿವಿಧ ಖಾಸಗಿ ಕೊರಿಯರ್ ಕೇಂದ್ರಗಳಲ್ಲಿ ವಿಶೇಷ ತಪಾಸಣೆ ನಡೆಸಲಾಯಿತು.ಕಾರವಾರ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ತಂಡವು ಯಲ್ಲಾಪುರಕ್ಕೆ ಆಗಮಿಸಿ, ಅಂಚೆ ಮತ್ತು ಕೊರಿಯರ್ ಮೂಲಕ ಸಾಗಣೆಯಾಗುವ ಪಾರ್ಸೆಲ್‌ಗಳನ್ನು ಪರಿಶೀಲಿಸಿತು.
ಮಾದಕ ವಸ್ತುಗಳು ಅಥವಾ ಇತರೆ ನಿಷೇಧಿತ ವಸ್ತುಗಳ ಸಾಗಣೆ ನಡೆಯುತ್ತಿದೆಯೇ ಎಂಬುದನ್ನು ಶ್ವಾನದಳದ ಸಹಾಯದಿಂದ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಯಿತು.ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆಯ ಉದ್ದೇಶ ಮಾದಕ ವಸ್ತುಗಳ ಅಕ್ರಮ ಸಾಗಣೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ತಡೆಯುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ತಪಾಸಣೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.