ಬಿಸಿಲಿನ ತಾಪ, ಪ್ರಕೃತಿಯ ವಿಕೋಪ
– ದಿನೇಶ್ ಹೊಳ್ಳ.
ದಿನಂದಿನ ಬಿಸಿಲಿನ ತಾಪ ಹೆಚ್ಚಾಗುತ್ತಾ ಇದೆ. ಮಳೆಯ ದಿನಗಳನ್ನು ನಿರೀಕ್ಷೆ ಮಾಡುತ್ತಾ ಈ ತಾಪ ಮುಕ್ತಿಗೆ ದಿನಗಳನ್ನು ಲೆಕ್ಕ ಹಾಕುತ್ತಿರುವ ಈ ಸಮಯದಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆ ಬಂದರೂ ತಾಪ ಹೆಚ್ಚಾಗುತ್ತಲೇ ಇದೆ.
ಊರಿಗೆ ಊರೇ ಬರಗಾಲದಿಂದ ಬೆರಗಾಗುತ್ತಿದೆ. ಇನ್ನು ಮಳೆ ಬಂದ ಕೂಡಲೇ ಭೂಕುಸಿತ, ಜಲಪ್ರವಾಹದಂತಹ ಪ್ರಾಕೃತಿಕ ದುರಂತಗಳ ಆತಂಕದಲ್ಲಿದ್ದೇವೆ.
ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂಬ ಪ್ರಕೃತಿ ವಿಂಗಡಣೆಯ ನಡುವೆ ಚಳಿಗಾಲ ಮಾಯವಾಗಿ ಮಳೆಗಾಲ ಆದ ಕೂಡಲೇ ಬೇಸಿಗೆ ಕಾಲವಾಗಿ ಬೇಸಿಗೆ ಕಾಲ ಆಗುವಲ್ಲಿ ಬರಗಾಲ ಎಂಬ ಹೊಸ ಕಾಲವನ್ನು ಸೃಷ್ಟಿಸಿದ ಮಾನವ ಸಾಮ್ರಾಜ್ಯವು ಕಾಲ ಚಕ್ರದಲ್ಲಿ ತನ್ನದೇ ಆದ ತಪ್ಪಿನಿಂದ ನೈಸರ್ಗಿಕ ದುರಂತಗಳನ್ನು ಆಹ್ವಾನಿಸಿ ʻಅಪರಾಧಿ ನಾನಲ್ಲʼ ಎಂದು ಪ್ರಕೃತಿಯ ಮೇಲೆ ದೋಷಾರೋಪಣೆ ಮಾಡಿ ಬಚಾವ್ ಆಗಲು ಪ್ರಯತ್ನಿಸುತ್ತಾನೆ.
ಆದರೆ ಪ್ರಕೃತಿಯು ಎಲ್ಲವನ್ನೂ ಸಹಿಸಿಕೊಂಡು, ಇತಿ ಮಿತಿಗಳನ್ನು ಕಳೆದು ಅತಿಯಾದ ಮೇಲೆ ಮುನಿಸಿಕೊಳ್ಳುವುದು ಸಹಜವೇ. ಈಗ ಆಗುತ್ತಿರುವ ಪ್ರಾಕೃತಿಕ ದುರಂತಗಳ ಹಿಂದೆ ನಿಸರ್ಗದ ಪ್ರತೀಕಾರ, ಆವೇಶ, ಅಸಹನೆ ಎಲ್ಲವೂ ಇದೆ.
ಬೆಳಿಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಮಲಗುವ ತನಕ ಅತೀ ಅಗತ್ಯವಾಗಿ ಬೇಕಾಗಿರುವ ನೀರನ್ನು ಸಂರಕ್ಷಣೆ ಮಾಡಲು ಎಷ್ಟು ಕೆರೆ, ನದಿ, ಸಾಗರಗಳನ್ನು ರಕ್ಷಣೆ ಮಾಡಿದ್ದೇವೆ? ಎಲ್ಲಾ ನದಿ, ಸರೋವರಗಳಲ್ಲಿ ಮಾನವ ನಿರ್ಮಿತ ವಿಷಯುಕ್ತ ತ್ಯಾಜ್ಯ, ಮಾಲಿನ್ಯಗಳ ‘ಗಿಫ್ಟ್’ ನೀಡಿರುತ್ತೇವೆ.
ಗಾಳಿ, ನೆರಳು, ತಂಪು ಬೇಕಾಗಿರುವ ಅದೆಷ್ಟೋ ಗಿಡ-ಮರಗಳನ್ನು ಕಡಿಯುವ ಸರಕಾರದ ಅಸಂಬದ್ಧ ಯೋಜನೆಗಳು ಆಗುವಾಗ ನಾವೆಷ್ಟು ವಿರೋಧ ಮಾಡಿದ್ದೇವೆ? ನಮ್ಮ ಬದುಕಿಗೆ ಚೇತನಾ ಶಕ್ತಿ ನೀಡುತ್ತಿರುವ ಪಶ್ಚಿಮ ಘಟ್ಟದಲ್ಲಿ ಅವೈಜ್ಞಾನಿಕ, ಪರಿಸರ ವಿನಾಶಕ ಯೋಜನೆಗಳನ್ನು ಮಾಡುತ್ತಿರುವಾಗ ನಾವೆಷ್ಟು ಅದನ್ನು ತಡೆದಿದ್ದೇವೆ? ನಾವೆಷ್ಟು ವಿರೋಧಿಸಿದ್ದೇವೆ ?!
ಪ್ರತೀ ದಿನ, ಪ್ರತೀ ಹಂತಗಳಲ್ಲಿ ಪ್ರಕೃತಿಗೆ ಮಾರಣಾoತಿಕ ಏಟು ಬೀಳುತ್ತಿರುವಾಗಲೂ ನಾವು ಮೌನವಾಗಿದ್ದು ಭೂಮಿ ತಾಯಿಯ ನೋವು, ವೇದನೆಯನ್ನು ಅರ್ಥ ಮಾಡುವಲ್ಲಿ ಸೋತಿರುವ ಕಾರಣ ಇಂದು ಪ್ರಕೃತಿ ಕೂಡಾ ನಮ್ಮ ವಿರುದ್ಧವೇ ಹೆಜ್ಜೆ ಹಾಕುತ್ತಿದೆ.
ಆದದ್ದು ಆಯಿತು, ಇನ್ನಾದರೂ ನಮ್ಮ ಮಕ್ಕಳ ಭವಿಷ್ಯದ ಭದ್ರತೆಯ ದೃಷ್ಟಿಯಿಂದಾದರೂ ನಾವು ಎಚ್ಚರಗೊಳ್ಳಬೇಕು. ಆ ಸರಕಾರ, ಈ ಸರಕಾರ ಎಂದು ಕಾಯದೇ ನಮ್ಮ ನಮ್ಮ ಮನೆ, ಕಚೇರಿ, ಬೀದಿ ಸುತ್ತ ಮುತ್ತ ಒಂದಷ್ಟು ಹಸಿರು ಹೊದಿಕೆ ನಿರ್ಮಿಸುವಲ್ಲಿ ಮತ್ತು ಮಳೆ ನೀರು ಕೊಯಿಲು ಮುಂತಾದವುಗಳನ್ನು ಮಾಡದೇ ಹೋದರೆ ಮುಂದಿನ ದುರಂತಗಳನ್ನು ತಪ್ಪಿಸಿ, ತಾಪ ಹೆಚ್ಚಾಗುವುದನ್ನು ಕಡಿಮೆ ಮಾಡಿ ತಂಪು ಹೆಚ್ಚಾಗುವಂತೆ ಮಾಡಿ ಭೂಮಿ ತಾಯಿಯ ನೆಮ್ಮದಿಗೆ ಒಂದಷ್ಟು ಒಳಿತನ್ನೇ ಮಾಡುವಂತೆ ಕ್ರಿಯಾಶೀಲರಾಗೋಣ.