Thursday, July 23, 2026
Join WhatsApp Group
HomeInformationSpecialಭಾರತದಲ್ಲಿ 'ಪ್ಲಾಸ್ಟಿಕ್ ಕರೆನ್ಸಿ' ಯುಗ?

ಭಾರತದಲ್ಲಿ ‘ಪ್ಲಾಸ್ಟಿಕ್ ಕರೆನ್ಸಿ’ ಯುಗ?

ಮಡಚಿ ಜೇಬಿಗೆ ಹಾಕುವ ನೋಟುಗಳು… ಮಳೆಯಲ್ಲಿ ಒದ್ದೆಯಾಗಿ ಹರಿದುಹೋಗುವ ನೋಟುಗಳು… ನಕಲಿ ನೋಟುಗಳ ಕಾಟ… ಇವೆಲ್ಲವೂ ಇನ್ನು ಕೆಲವೇ ವರ್ಷಗಳಲ್ಲಿ ಇತಿಹಾಸವಾಗಬಹುದೇ? ದೇಶದಲ್ಲಿ ಶೀಘ್ರದಲ್ಲೇ ಪ್ಲಾಸ್ಟಿಕ್ ಕರೆನ್ಸಿ ನೋಟುಗಳು ಚಲಾವಣೆಗೆ ಬರಲಿವೆ ಎಂಬ ಚರ್ಚೆ ಮತ್ತೆ ಜೋರಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವಾದರೂ, ಅದರ ಸಂಪೂರ್ಣ ಸ್ವಾಮ್ಯದ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ (BRBNMPL) ಜಾಗತಿಕ ಕಂಪನಿಗಳಿಂದ ಪಾಲಿಮರ್ ಬ್ಯಾಂಕ್‌ನೋಟುಗಳಿಗೆ ಬೇಕಾದ ವಿಶೇಷ ಸಬ್‌ಸ್ಟ್ರೇಟ್ ಪೂರೈಕೆಗಾಗಿ ಆಸಕ್ತಿ ಆಹ್ವಾನಿಸಿರುವುದು ಈ ಸಾಧ್ಯತೆಗೆ ಮತ್ತಷ್ಟು ಬಲ ನೀಡಿದೆ.

ಇದು ಇನ್ನೂ ಕೇವಲ ಪೂರ್ವಸಿದ್ಧತಾ ಹಂತ ಎನ್ನುವುದು ಆರ್‌ಬಿಐಯ ಸ್ಪಷ್ಟನೆ. ಆದರೆ, ಒಂದು ದೇಶ ಹೊಸ ಕರೆನ್ಸಿ ವ್ಯವಸ್ಥೆಯತ್ತ ಸಾಗುವಾಗ ಇಂತಹ ಸಿದ್ಧತೆಗಳೇ ಮೊದಲ ಹೆಜ್ಜೆಯಾಗಿರುವುದರಿಂದ ಹಣದ ರೂಪವೇ ಬದಲಾಗುವ ದಿನಗಳು ದೂರವಿಲ್ಲ ಎನ್ನಬಹುದು.

ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಲ್ಲ. ವಿಶೇಷ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಾಗುವ ಇವು ಸಾಮಾನ್ಯ ನೋಟುಗಳಿಗಿಂತ 2.5ರಿಂದ 4 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ. ನೀರು ಬಿದ್ದರೂ ಸುಲಭವಾಗಿ ಹಾಳಾಗುವುದಿಲ್ಲ. ಧೂಳು, ಹರಿದುಹೋಗುವುದು, ಸವೆದುಹೋಗುವುದು ಇವುಗಳಲ್ಲಿ ಬಹಳ ಕಡಿಮೆ. ಪರಿಣಾಮವಾಗಿ ಸರ್ಕಾರಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ನೋಟು ಮುದ್ರಿಸುವ ವೆಚ್ಚವೂ ಕಡಿಮೆಯಾಗಬಹುದು.

ಇದರ ಮತ್ತೊಂದು ದೊಡ್ಡ ಲಾಭ ಭದ್ರತೆ. ಪಾಲಿಮರ್ ನೋಟುಗಳಲ್ಲಿ ಅತ್ಯಾಧುನಿಕ ಭದ್ರತಾ ವಿನ್ಯಾಸಗಳು ಹಾಗೂ ನಕಲಿ ಮಾಡುವುದು ಅತ್ಯಂತ ಕಷ್ಟವಾಗುವ ವಿಶೇಷ ಅಂಶಗಳನ್ನು ಸೇರಿಸಬಹುದು. ಇದೇ ಕಾರಣಕ್ಕೆ ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ಪಾಲಿಮರ್ ಕರೆನ್ಸಿಯನ್ನು ಯಶಸ್ವಿಯಾಗಿ ಬಳಸುತ್ತಿವೆ.

ಆದರೆ, ಎಲ್ಲವೂ ಸುಲಭವಲ್ಲ. ಪಾಲಿಮರ್ ನೋಟುಗಳ ಉತ್ಪಾದನಾ ವೆಚ್ಚ ಆರಂಭದಲ್ಲಿ ಹೆಚ್ಚು. ನೋಟು ಮುದ್ರಣ ಯಂತ್ರಗಳು, ಎಟಿಎಂಗಳು, ಕ್ಯಾಶ್ ರಿಸೈಕ್ಲರ್‌ಗಳು ಹಾಗೂ ನೋಟು ವಿಂಗಡಿಸುವ ಯಂತ್ರಗಳನ್ನು ಹೊಸ ವ್ಯವಸ್ಥೆಗೆ ಹೊಂದುವಂತೆ ಬದಲಿಸಬೇಕಾಗಬಹುದು.

ಪಾಲಿಮರ್ ತಯಾರಿಸುವ ಜಾಗತಿಕ ಕಂಪನಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅವುಗಳ ಮೇಲಿನ ಅವಲಂಬನೆಯೂ ಹೆಚ್ಚಾಗುತ್ತದೆ. ಬಳಸಿದ ನೋಟುಗಳನ್ನು ಮರುಬಳಕೆ ಅಥವಾ ವಿಲೇವಾರಿ ಮಾಡುವುದಕ್ಕೂ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕಾಗುತ್ತದೆ.

ಹಾಗಾದರೆ, ನಾಳೆಯಿಂದಲೇ ನಮ್ಮ ಕೈಗೆ ಪ್ಲಾಸ್ಟಿಕ್ ನೋಟು ಬರಲಿದೆಯೇ? ಸದ್ಯಕ್ಕೆ ಉತ್ತರ ‘ಇಲ್ಲ’. ಆರ್‌ಬಿಐ ಗವರ್ನರ್ ಅವರ ಪ್ರಕಾರ, ಪಾಲಿಮರ್ ನೋಟುಗಳ ಲಾಭ-ನಷ್ಟಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಜಾಗತಿಕ ಟೆಂಡರ್ ಆಹ್ವಾನಿಸಿರುವುದರಿಂದಲೇ ನೋಟುಗಳು ತಕ್ಷಣ ಮುದ್ರಣವಾಗುತ್ತವೆ ಎಂದರ್ಥವಲ್ಲ.

ಮೊದಲು ಪ್ರಾಯೋಗಿಕ ಯೋಜನೆ (Pilot Project) ನಡೆಸಿ, ಅದರ ಯಶಸ್ಸಿನ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಹೀಗಾಗಿ, ನಮ್ಮ ಜೇಬಿನಲ್ಲಿರುವ ಗಾಂಧಿ ಚಿತ್ರವಿರುವ ನೋಟಿನ ರೂಪ ಬದಲಾಗಬಹುದು. ಆದರೆ ಅದರ ಮೌಲ್ಯ ಬದಲಾಗುವುದಿಲ್ಲ. ಸದ್ಯಕ್ಕೆ ಇದು ಒಂದು ಸಾಧ್ಯತೆ ಮಾತ್ರ. ಆದರೆ ಆರ್‌ಬಿಐಯ ಇತ್ತೀಚಿನ ಹೆಜ್ಜೆಗಳು ನೋಡಿದರೆ, ಭಾರತದ ಕರೆನ್ಸಿ ವ್ಯವಸ್ಥೆ ಹೊಸ ಯುಗದ ಬಾಗಿಲು ತಟ್ಟುತ್ತಿರುವುದು ಮಾತ್ರ ನಿಜ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share