ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಸಕ್ರಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹಣೆ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಎಲ್‌ಒಗಳು ಫಾರ್ಮ್ ವಿತರಿಸಲು ಒಂದು ಬಾರಿ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲು ಮೂರು ಬಾರಿ ಮತದಾರರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮತದಾರರು ಫಾರ್ಮ್ ಭರ್ತಿ ಮಾಡಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ಮರಳಿ ನೀಡಬೇಕು. ಫಾರ್ಮ್ ಸಲ್ಲಿಸದಿದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎನ್ಯೂಮರೇಷನ್ ಫಾರ್ಮ್‌ಗೆ ಮತದಾರರು ಅಥವಾ ಕುಟುಂಬದ ಸದಸ್ಯರ ಸಹಿ ಹಾಗೂ ಇತ್ತೀಚಿನ ಬಣ್ಣದ ಭಾವಚಿತ್ರ ಅಗತ್ಯವಿದ್ದು, ಯಾವುದೇ ದಾಖಲೆಗಳನ್ನು ಲಗತ್ತಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ಕಾಗಿ 1,445 ಬಿಎಲ್‌ಒಗಳು ಹಾಗೂ 144 ಬಿಎಲ್‌ಒ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ 2,822 ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ವಹಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ಗೊಂದಲ ಉಂಟಾದರೆ ತಮ್ಮ ವ್ಯಾಪ್ತಿಯ ಬಿಎಲ್‌ಒಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡಬೇಕು. ಅನಕ್ಷರಸ್ಥರು, ಕಾರ್ಮಿಕರು, ಸ್ಲಂ ಪ್ರದೇಶದ ನಿವಾಸಿಗಳು ಹಾಗೂ ಶೋಷಿತ ವರ್ಗದ ಜನರಿಗೆ ವಿಶೇಷ ಅರಿವು ಮೂಡಿಸಬೇಕು. ಕುಟುಂಬದ ಎಲ್ಲ ಸದಸ್ಯರು ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಮೂಲಕ ಶುದ್ಧ ಮತ್ತು ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಎಲ್ಲಾ ಪಕ್ಷಗಳಿಂದ ಪೂರ್ಣ ಸಹಕಾರ ದೊರೆಯಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭರವಸೆ ನೀಡಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭುಶೆಟ್ಟಿ, ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಬಾಬು ಶೇಟ್, ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಸಿಪಿಐ(ಎಂ)ನ ಶ್ಯಾಮ್, ಶಾಂತಾರಾಮ ನಾಯ್ಕ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.