Monday, September 7, 2026
Join WhatsApp Group
HomeLocal Newsಗರ್ಭಧಾರಣೆ ದೃಢಪಟ್ಟ ತಕ್ಷಣ ತಾಯಿ ಕಾರ್ಡ್ ಕಡ್ಡಾಯ: ಡಿಸಿ

ಗರ್ಭಧಾರಣೆ ದೃಢಪಟ್ಟ ತಕ್ಷಣ ತಾಯಿ ಕಾರ್ಡ್ ಕಡ್ಡಾಯ: ಡಿಸಿ

ಕಾರವಾರ: ಗರ್ಭಧಾರಣೆ ದೃಢಪಟ್ಟ ಪ್ರತಿಯೊಬ್ಬ ಮಹಿಳೆಯನ್ನೂ ತಾಯಿ ಕಾರ್ಡ್‌ಗೆ ನೋಂದಾಯಿಸಿ, ಹೆರಿಗೆ ಆಗುವವರೆಗೂ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಜಿಲ್ಲಾ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರನ್ನು ತಾಯಿ ಕಾರ್ಡ್‌ಗೆ ನೋಂದಾಯಿಸಿದ ಬಳಿಕ ವಿವಿಧ ಇಲಾಖೆಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಅವರಿಗೆ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ವೈದ್ಯಕೀಯ ಸೇವೆ, ಲಸಿಕೆ ಹಾಗೂ ಔಷಧಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಪಡೆಯುತ್ತಿರುವ ಗರ್ಭಿಣಿಯರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಪಡೆದುಕೊಳ್ಳಬೇಕು. ಅಂತಹ ಮಹಿಳೆಯರಿಗೂ ತಾಯಿ ಕಾರ್ಡ್ ನೀಡಿ, ಸರ್ಕಾರಿ ಆರೋಗ್ಯ ಸೇವೆಗಳು ಹಾಗೂ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 5053 ಹೆರಿಗೆಗಳು ನಡೆದಿವೆ. ಈ ಪೈಕಿ 2211 ಸಿ-ಸೆಕ್ಷನ್ ಹೆರಿಗೆಗಳಾಗಿದ್ದು, ಸಿ-ಸೆಕ್ಷನ್ ಪ್ರಮಾಣ ಶೇ.44ರಷ್ಟಿದೆ. ಇದೇ ಅವಧಿಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

 ಜಿಲ್ಲೆಯ ಎಲ್ಲ ಲಸಿಕಾ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ನಿರಂತರವಾಗಿ ಪರಿಶೀಲಿಸಿ, ಯಾವುದೇ ಔಷಧದ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವವರ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಂಡುಬಂದ ಬಳಿಕವೇ ಡಿಸ್ಚಾರ್ಜ್ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಕುರಿತು ವಿಸ್ತೃತ ಚರ್ಚೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ ದೊಡ್ಡಮನಿ, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ್, ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಂಕರ್ ರಾವ್, ಕ್ಯಾ. ಡಾ. ರಮೇಶ್ ರಾವ್, ಡಾ. ಅಶ್ವಿನಿ ಬೋರ್ಕರ್, ಡಾ. ಪ್ರಸನ್ನ, ಕ್ರಿಮ್ಸ್ ವೈದ್ಯ ಡಾ. ಹೇಮಗಿರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ವೈದ್ಯಾಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share