Monday, September 7, 2026
Join WhatsApp Group
HomeLocal Newsಜಾರುಬಂಡಿ ಆಡೋಣ ಬನ್ನಿ..!

ಜಾರುಬಂಡಿ ಆಡೋಣ ಬನ್ನಿ..!

ರಾಮನಕೊಪ್ಪ ರಸ್ತೆಯಲ್ಲಿ ಸಂಚಾರವಲ್ಲ, ಸಾಹಸ!

ಯಲ್ಲಾಪುರ: ಮಳೆ ಬಂದರೆ ಮಲೆನಾಡಿನ ಸೌಂದರ್ಯ ಹೆಚ್ಚುತ್ತದೆ. ಆದರೆ ಅದೇ ಮಳೆ ಗ್ರಾಮೀಣ ರಸ್ತೆಗಳ ನಿಜ ಮುಖವನ್ನೂ ಬಯಲು ಮಾಡುತ್ತದೆ. ಒಂದು ಕಡೆ ವಾರಗಟ್ಟಲೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿದರೆ, ಇನ್ನೊಂದು ಕಡೆ ರಸ್ತೆಗಳು ವಾಹನ ಸಂಚಾರಕ್ಕೆ ಬದಲಾಗಿ ಜಾರುಬಂಡಿ ಆಟಕ್ಕೆ ಸಿದ್ಧವಾದ ಮೈದಾನಗಳಂತೆ ಕಾಣಿಸುತ್ತವೆ.

ಯಲ್ಲಾಪುರ ತಾಲೂಕಿನ ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ ಇದೀಗ ಅಕ್ಷರಶಃ ಇದೇ ಚಿತ್ರಣವನ್ನು ನೀಡುತ್ತಿದೆ.

ಯಲ್ಲಾಪುರ–ಮುಂಡಗೋಡು ರಸ್ತೆಯ ಲಿಂಗ್ಯಾನಕೊಪ್ಪ ಶಾಲೆ ಸಮೀಪದಿಂದ ಮಾವಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ರಾಮನಕೊಪ್ಪಕ್ಕೆ ಹೋಗುವ ರಸ್ತೆಗೆ ಮಳೆಗಾಲಕ್ಕೂ ಮುನ್ನ 15ನೇ ಹಣಕಾಸು ಯೋಜನೆಯಡಿ ಖಡಿ ರಸ್ತೆಯ ಮೇಲೆ ಮಣ್ಣು ಹಾಕಲಾಗಿತ್ತು. ಆದರೆ ಸತತ ಮಳೆಯಿಂದ ಆ ಮಣ್ಣು ಕೆಸರಾಗಿ ಮಾರ್ಪಟ್ಟು, ರಸ್ತೆ ಈಗ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಪ್ರತಿದಿನ ಒಂದಲ್ಲ ಒಂದು ಬೈಕ್ ಜಾರಿ ಬೀಳುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ. ವಿಶೇಷವಾಗಿ ಶಾಲೆಗೆ ತೆರಳುವ ಶಿಕ್ಷಕರು ಹಾಗೂ ಗ್ರಾಮಸ್ಥರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಕ್ಷಣಮಾತ್ರ ಎಚ್ಚರ ತಪ್ಪಿದರೂ ನೆಲಕ್ಕುರುಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ವಾಹನ ಚಾಲನೆಯ ಅನುಭವಕ್ಕಿಂತ ಸಾಹಸ ಕ್ರೀಡೆಯ ಅನುಭವವೇ ಹೆಚ್ಚು ಎಂಬುದು ಗ್ರಾಮಸ್ಥರ ಅಳಲು. ಗ್ರಾಮದಿಂದ ಪಟ್ಟಣಕ್ಕೆ ಅಗತ್ಯ ಕೆಲಸಗಳಿಗೆ ತೆರಳಬೇಕಾದರೂ ಹರಸಾಹಸ ಪಡಬೇಕಾಗಿದೆ.

ಸ್ಥಳೀಯರ ಪ್ರಕಾರ, ತಾತ್ಕಾಲಿಕವಾಗಿ ಮಣ್ಣು ಹಾಕುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಳೆಗಾಲದಲ್ಲಿಯೂ ಸುಗಮ ಸಂಚಾರ ಸಾಧ್ಯವಾಗುವಂತೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ.

ಸದ್ಯಕ್ಕೆ ಈ ರಸ್ತೆಯಲ್ಲಿ ವಾಹನ ಓಡಿಸುವವರು ರಸ್ತೆ ಬಳಸುವುದಕ್ಕಿಂತ “ಜಾರುಬಂಡಿ ಆಡೋಣ ಬನ್ನಿ..!” ಎಂಬ ಆಹ್ವಾನವನ್ನೇ ಸ್ವೀಕರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share