ಕಾರವಾರ: ಎಸ್ಐಆರ್ ಪ್ರಕ್ರಿಯೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ಜವಾಬ್ದಾರಿ ಹೊತ್ತಿರುವ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಈ ಕಾರ್ಯ ರಾಜ್ಯಮಟ್ಟದಲ್ಲಿಯೂ ಸುದ್ದಿಯಾಗಿರುವುದು ಹೆಮ್ಮೆಯ ಸಂಗತಿ. ಇದೇ ಉತ್ಸಾಹದೊಂದಿಗೆ ಮುಂದೆಯೂ ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕರೆ ನೀಡಿದರು.
ಬಿಜೆಪಿ ಕಾರವಾರ ನಗರ ಮತ್ತು ಗ್ರಾಮೀಣ ಮಂಡಲಗಳ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಐಆರ್ ಕುರಿತು ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಪರಿಶ್ರಮವನ್ನು ಶ್ಲಾಘಿಸಿದ ರೂಪಾಲಿ ನಾಯ್ಕ, ಸಂಘಟನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಕ್ಷದ ಕಾರ್ಯಕ್ಕೆ ಬಲ ತುಂಬಿರುವ ಕಾರ್ಯಕರ್ತರು ಇದೇ ರೀತಿಯ ಬದ್ಧತೆಯನ್ನು ಮುಂದುವರಿಸಬೇಕು ಎಂದರು.
ವೆಂಕಟೇಶ್ ನಾಯಕ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಇದೀಗ ಕೊನೆಯ ಹಂತದಲ್ಲಿದ್ದು, ಇಲ್ಲಿಯವರೆಗೆ ಕಾರ್ಯಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘಟನಾ ಚಟುವಟಿಕೆಗಳಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಎಲ್ಎ-1 ರಾಘು ಭಟ್ ಅವರು ಎಸ್ಐಆರ್ನ ಮುಂದಿನ ಹಂತದಲ್ಲಿ ಬಿಎಲ್ಎ-2ರ ಜವಾಬ್ದಾರಿಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರಡೇಕರ್, ರಾಜ್ಯ ಪ್ರಕೋಷ್ಠ ಸದಸ್ಯ ಸುನಿಲ್ ಸೋನಿ, ನಗರ ಪ್ರಭಾರಿ ರಾಜು ಭಂಡಾರಿ, ಮನೋಜ್ ಭಟ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಉಪಸ್ಥಿತರಿದ್ದರು.
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸ್ವಾಗತಿಸಿದರು. ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ವಂದಿಸಿದರು.