ಯಲ್ಲಾಪುರ: ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)–ವಿಬಿ-ಜಿ ರಾಮ್-ಜಿ ಯೋಜನೆಯಲ್ಲಿ ಹಲವು ಅವಕಾಶಗಳಿವೆ ಎಂದು ಯಲ್ಲಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ ಹೇಳಿದರು.
ಯಲ್ಲಾಪುರ ತಾಲೂಕಿನ ಅನಗೋಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರನ್ನು ಒಗ್ಗೂಡಿಸಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಬಿ-ಜಿ ರಾಮ್-ಜಿ ಹಾಗೂ ಡೇ-ಎನ್ಆರ್ಎಲ್ಎಂ ಯೋಜನೆಗಳ ಸಮನ್ವಯದಡಿ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ಹಲವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ, ಎಸ್ಎಚ್ಇ ಮಾರ್ಟ್, ಸಮುದಾಯ ಆಧಾರಿತ ಕೋಳಿ ಶೆಡ್, ಜಿಪಿಎಲ್ಎಫ್ ಅಥವಾ ಸಿಎಲ್ಎಫ್ ಕಟ್ಟಡ, ಕೋಲ್ಡ್ ಪ್ರೆಸ್ ಆಯಿಲ್ ಪ್ರೊಸೆಸಿಂಗ್ ಘಟಕ, ಗ್ರಾಮೀಣ ಗೋದಾಮು, ಜೀವನೋಪಾಯ ಸೇವಾ ಕೇಂದ್ರ ಹಾಗೂ ಕಸ್ಟಮ್ ಹೈರಿಂಗ್ ಸರ್ವೀಸ್ ಸೆಂಟರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಯೋಜನೆಯಡಿ ಪಡೆಯಬಹುದು ಎಂದು ವಿವರಿಸಿದರು.
ಇದರ ಜತೆಗೆ ಬಿಆರ್ಸಿ ಕಟ್ಟಡ, ಸೀಡ್ ಬ್ಯಾಂಕ್ ಸೇರಿದಂತೆ ಸ್ವಸಹಾಯ ಸಂಘಗಳ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳ ಅಭಿವೃದ್ಧಿಗೂ ಅವಕಾಶವಿದೆ. ಮಹಿಳೆಯರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಸದಸ್ಯರ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಅನಗೋಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಪಿ. ಶೇಟ್, ಟಿಎಮ್ಆಯ್ಎಸ್ ರಘು, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಎಂಬಿಕೆ ಮರಿಯಂಬಿ ಸೈಯದ್, ಒಕ್ಕೂಟದ ಅಧ್ಯಕ್ಷೆ ಸೀಮಾ ಭಾಸ್ಕರ ಮರಾಠೆ ಸೇರಿದಂತೆ ಒಕ್ಕೂಟದ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.